ಬೆಂಗಳೂರು: ನಗರದ ಹಜ್ ಭವನ ಮತ್ತು ಕೃಷಿ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್ ಅನ್ನು ಕೋವಿಡ್ -19 ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲು ನಿರ್ಧರಿಸಲಾಗಿದೆ.
ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಗುರುವಾರ ಹಜ್ ಭವನದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕಲ್ಪಿಸಲಾಗುತ್ತಿರುವ ವ್ಯವಸ್ಥೆಯ ಪರಿಶೀಲನೆ ನಡೆಸಿ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸೋಂಕಿತರ ಚಿಕಿತ್ಸೆಗೆ ಸಜ್ಜಾದ ಹಜ್ ಭವನ ಸಭೆಯ ನಂತರ ಮಾತನಾಡಿದ ವಿಶ್ವನಾಥ್, ಹಜ್ ಭವನದಲ್ಲಿ ಕೋವಿಡ್-19 ರ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ 50 ಹಾಸಿಗೆಗಳ ಐಸಿಯು ಘಟಕ ಮತ್ತು 150 ಹಾಸಿಗೆಗಳ ಹೈಫ್ಲೋ ಆಕ್ಸಿಜನ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಹಜ್ ಭವನದಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ಬುಧವಾರದ ವೇಳೆಗೆ ಚಿಕಿತ್ಸೆಗೆ ಲಭ್ಯವಾಗಲಿದೆ.ಇಲ್ಲಿ ಸೋಂಕಿತರ ಚಿಕಿತ್ಸೆಗೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ. ಯಲಹಂಕ ವಲಯದ ಜಿಕೆವಿಕೆಯ ಮಹಿಳಾ ಹಾಸ್ಟೆಲ್ ಅನ್ನೂ ಸಹ ಕೋವಿಡ್ ಕೇರ್ ಸೆಂಟರ್‌ನ್ನಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಇಲ್ಲಿ 350 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಸೋಮವಾರದಿಂದ ಚಿಕಿತ್ಸೆಗೆ ಲಭ್ಯವಾಗಲಿದೆ ಎಂದರು.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಇದನ್ನು ತಡೆಯಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ತುರ್ತಾಗಿ ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತಿದೆ. ಈ ಹಿನ್ನೆಲೆ ಯಲಹಂಕ ವಲಯದಲ್ಲಿ ಸೋಂಕಿತರಿಗೆ ತಡ ಮಾಡದೇ ಸಕಾಲದಲ್ಲಿ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಲಯದಲ್ಲಿ ಸೋಂಕಿತರ ಆರೋಗ್ಯ ರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅಗತ್ಯ ಬಿದ್ದರೆ ಮತ್ತಷ್ಟು ಕೋವಿಡ್ ಕೇರ್ ಸೆಂಟರ್ ಗಳನ್ನು ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.