ಬೆಂಗಳೂರು:ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಸಂಬಂಧ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳಿಂದ ತಲೆಕೂದಲು ಸೇರಿದಂತೆ ಇನ್ನಿತರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಮಾದರಿಗಳನ್ನು ಪರೀಕ್ಷಾ ಕೇಂದ್ರ ರವಾನಿಸಿಯೂ ಆಗಿದೆ. ಆದರೆ, ಹಲವು ತಿಂಗಳು ಕಳೆದರೂ ವರದಿ ಮಾತ್ರ ಇನ್ನೂ ಸಿಸಿಬಿ ಕೈ ಸೇರಿಲ್ಲ.
ತಾರ್ಕಿಕ ಅಂತ್ಯಕ್ಕೆ ವರದಿ ಪ್ರಮುಖ ಸಾಕ್ಷ್ಯ:
ಪ್ರಕರಣ ದಾಖಲಾಗಿ ಎಂಟು ತಿಂಗಳು ಕಳೆಯುತ್ತಾ ಬಂದರೂ ಎಫ್ಎಸ್ಎಲ್ ವರದಿ ಸಿಸಿಬಿ ತನಿಖಾಧಿಕಾರಿಗಳಿಗೆ ದೊರೆತಿಲ್ಲ. ಡ್ರಗ್ಸ್ ಪ್ರಕರಣ ಸಂಬಂಧ ಎಲ್ಲ ಆಯಾಮಗಳಿಂದಲೂ ಖಚಿತ ಪಡಿಸಿಕೊಳ್ಳಲು, ಆರೋಪಿಗಳಿಂದ ಕಳೆದ ವರ್ಷ ಡಿಸೆಂಬರ್ನಲ್ಲಿ ಕೂದಲು ಸಂಗ್ರಹಿಸಿ ಹೈದರಾಬಾದ್ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಿಸಿಬಿ ಪೊಲೀಸರು ಕಳುಹಿಸಿದ್ದರು. ಮಾದರಿ ಸಂಗ್ರಹಿಸಿ ಹಲವು ತಿಂಗಳು ಕಳೆದರೂ ವರದಿ ಮಾತ್ರ ಬಂದಿಲ್ಲ.
ಇದನ್ನೂ ಓದಿ:ಅಫ್ಘಾನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಹಿರಿಯ ಐಪಿಎಸ್ ಅಧಿಕಾರಿ ನೇಮಿಸಿದ ಸರ್ಕಾರ
ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಈ ವರದಿ ಪ್ರಮುಖ ಸಾಕ್ಷ್ಯವಾಗಿ ಪರಿಗಣನೆಯಾಗಲಿದೆ. ತ್ವರಿತಗತಿಯಲ್ಲಿ ಪರೀಕ್ಷಾ ವರದಿ ನೀಡುವಂತೆ ಎಫ್ಎಸ್ಎಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೂದಲಿನ ಬೇರಿನಿಂದ ಬಯಲಾಗುತ್ತೆ ಬಣ್ಣ:
ಕೂದಲು ಮಾದರಿಯನ್ನು ಕಿವಿಯ ಮೇಲ್ಭಾಗ ಹಾಗೂ ತಲೆಯ ಮಧ್ಯ ಭಾಗದಿಂದ ಸಂಗ್ರಹ ಮಾಡಲಾಗುತ್ತದೆ. ಅದನ್ನು ಎಫ್ಎಸ್ಎಲ್ಗೆ ರವಾನೆ ಮಾಡುತ್ತಾರೆ. ಕೂದಲಿನ ಬೇರಿನ ಮೂಲಕ ಡ್ರಗ್ಸ್ ಸೇವನೆ ಮಾಡಿದ್ದಾರಾ/ಇಲ್ಲವಾ ಎಂಬುದು ಪರೀಕ್ಷೆಯಲ್ಲಿ ತಿಳಿಯಲಿದೆ. ಅಲ್ಲದೇ ಒಂದು ವರ್ಷದವರೆಗೂ ಡ್ರಗ್ಸ್ ಸೇವನೆ ಮಾಡಿದ್ದರಾ/ಇಲ್ಲವಾ ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಹ ಈ ವರದಿ ಸಹಕಾರಿಯಾಗಲಿದೆ.
2 ಬಾರಿ ಹೇರ್ ಸ್ಯಾಂಪಲ್ ರಿಪೋರ್ಟ್ ಕಳುಹಿಸಿದ ಸಿಸಿಬಿ:
ಪ್ರಕರಣದಲ್ಲಿ ಸಿನಿತಾರೆಯರಾದ ರಾಗಿಣಿ, ಸಂಜನಾ, ವಿರೇನ್ ಖನ್ನಾ, ವೈಭವ್ ಜೈನ್, ಅಭಿಷೇಕ್ ಸೇರಿದಂತೆ 10 ಮಂದಿ ಆರೋಪಿಗಳ ಕೂದಲು ಸ್ಯಾಂಪಲ್ ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು.
ಇದಕ್ಕೂ ಮುನ್ನ ಸ್ಯಾಂಪಲ್ ಸಂಗ್ರಹಿಸಿ ಕಳುಹಿಸಿದ್ದರೂ ತಾಂತ್ರಿಕ ಕಾರಣದಿಂದ ಹೈದರಾಬಾದ್ ಎಫ್ಎಸ್ಎಲ್ ಅಧಿಕಾರಿಗಳು ಸರಿಯಾಗಿ ಮತ್ತೊಮ್ಮೆ ಕಳುಹಿಸುವಂತೆ ಸೂಚಿಸಿದ್ದರು. ಮತ್ತೆ ಸ್ಯಾಂಪಲ್ ಕಲೆಕ್ಟ್ ಮಾಡಿ ಕಳುಹಿಸಲಾಗಿತ್ತು. ಎಫ್ಎಸ್ಎಲ್ನಲ್ಲಿ ನೂರಾರು ಕೇಸ್ಗಳ ಒತ್ತಡದಿಂದ ಪರೀಕ್ಷೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿ ಬಂದ ಬಳಿಕ ಅಂತಿಮ ತನಿಖಾ ವರದಿ:
2020ರ ಸೆಪ್ಟೆಂಬರ್ನಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ರಾಗಿಣಿ, ಸಂಜನಾ, ವೀರೇನ್ ಖನ್ನಾ, ಆದಿತ್ಯ ಆಳ್ವ ಸೇರಿ 20ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಎಫ್ಎಸ್ಎಲ್ ವರದಿ ಬಂದ ಬಳಿಕ ಅಂತಿಮ ತನಿಖಾ ವರದಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಪತ್ನಿ ಮೆಟ್ಟಿಲಿಂದ ಬಿದ್ದಳೆಂದು ಆಸ್ಪತ್ರೆಗೆ ಸೇರಿಸಿದ ಪತಿ; ಆಕೆ ಸತ್ತಾಗ ಬಯಲಾಯಿತು ಕೊಲೆ ಪ್ರಕರಣ