ಬೆಂಗಳೂರು: ಅತಿಯಾದ ಒತ್ತಡವೇ ಮನುಷ್ಯನ ತಲೆಗೂದಲು ಉದುರಲು ಪ್ರಮುಖ ಕಾರಣ ಎನ್ನುವ ವೈದ್ಯರು, ಇಂದು ಯುವ ಪೀಳಿಗೆಯಲ್ಲಿ ಶೇ.60ರಷ್ಟು ಮಂದಿ ಒತ್ತಡದಿಂದಾಗಿ ತಲೆಗೂದಲನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಸತ್ಯ, ಇದನ್ನು ಒಪ್ಪುವದು ಸಹಜ..
ದಿನದಿಂದ ದಿನಕ್ಕೆ ಯುವ ಸಮುದಾಯ ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕಿ ತಮ್ಮ ಆರೋಗ್ಯ ಜೀವನವನ್ನು ಹದಗೆಡಿಸಿಕೊಳ್ಳುತ್ತಿದೆ. ಜೀವನಕ್ರಮ, ಆಹಾರ ಪದ್ಧತಿ, ನಿದ್ರಾ ಹೀನತೆ, ದುಷ್ಚಟಗಳು ಸೇರಿದಂತೆ ಹಲವು ಕಾರಣಕ್ಕೆ ಯುವಕರು ಇಂದು ಹತ್ತು ಹಲವು ಸಮಸ್ಯೆಯನ್ನು ಯೌವನದಲ್ಲಿಯೇ ಹೊಂದುತ್ತಿದ್ದಾರೆ. ಇಳಿವಯಸ್ಸಿನಲ್ಲಿ, ನಡುವಯಸ್ಸು ಮೀರಿದ ಬಳಿಕ ಬರಬೇಕಿದ್ದ ಹಲವು ಸಮಸ್ಯೆಗಳು ಇಂದು 20 ರಿಂದ 30ರ ವಯೋಮಾನದ ಯುವಕರನ್ನು ಕಾಡುತ್ತಿದೆ.
ಸೌಂದರ್ಯ ಸೂಚಕಗಳಲ್ಲಿ ಹುಲುಸಾದ ತಲೆಗೂದಲು ಸಹ ಒಂದು. ಆಕರ್ಷಕ ತಲೆಗೂದಲನ್ನು ಹೊಂದಿರುವ ಯುವಕ-ಯುವತಿಯರು ನೂರಾರು ಮಂದಿ ಮಧ್ಯೆಯೂ ಎದ್ದು ಕಾಣುತ್ತಾರೆ. ಆದರೆ ಯುವಕರಲ್ಲಿ ಹಲವು ದುಷ್ಚಟಗಳು, ಬದಲಾದ ಬದುಕಿನ ಪದ್ಧತಿ ಕೂದಲು ಉದುರಲು ಕಾರಣವಾದರೆ. ಯುವತಿಯರಿಗೆ ಇವುಗಳ ಜತೆ ಅತಿಯಾದ ಸೌಂದರ್ಯ ಪ್ರಜ್ಞೆ ಮತ್ತು ರಾಸಾಯನಿಕಗಳ ಬಳಕೆಯಿಂದ ತಲೆಗೂದಲು ಉದುರುವ ಸಮಸ್ಯೆ ಎದುರಾಗಿದೆ. ಇದೆಲ್ಲಕ್ಕೂ ಇಂದಿನ ವೈದ್ಯಲೋಕದಲ್ಲಿ ಪರಿಹಾರವಿದೆ. ಆದರೆ ಅದನ್ನು ಅಳವಡಿಸಿಕೊಳ್ಳಲು ಹಲವರು ಹೆದರುತ್ತಾರೆ.
ಕಳೆದ ಕೆಲ ವರ್ಷಗಳ ಹೀಂದೆ ವಿಗ್ ಧರಿಸುವುದು ಒಂದು ಪರಿಹಾರವಾಗಿತ್ತು. ಆದರೆ ಇದು ಧರಿಸಿದವರಿಗೆ ಸರಿಯಾಗಿ ಹೊಂದಾಣಿಕೆ ಆಗದಿದ್ದರೆ ಆಭಾಸಕ್ಕೂ ಕಾರಣವಾಗುತ್ತಿತ್ತು. ಕೃತಕ ಕೂದಲು ಅನ್ನುವುದು ಪ್ರತಿಯೊಬ್ಬರಿಗೂ ತಿಳಿದು ಹೋಗುತ್ತಿತ್ತು. ನಿಧಾನವಾಗಿ ಕೂದಲು ಕಸಿ ದೇಶದಲ್ಲಿ ಜನಪ್ರಿಯವಾಗಲು ಆರಂಭಿಸಿತು. ಹತ್ತಾರು ವರ್ಷ ಹಿಂದೆಯೇ ಇದು ಆರಂಭವಾಗಿದ್ದೂ, ಜನ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಈಗಲೂ ಸಾಕಷ್ಟು ಹಿಂಜರಿಕೆ ಇದ್ದೇ ಇದೆ. ಆದರೆ ವೈದ್ಯರು ಹೇಳುವ ಪ್ರಕಾರ, ತಲೆಗೂದಲು ಉದುರುವ ಸಮಸ್ಯೆಗೆ ಸದ್ಯದ ಸಂದರ್ಭದಲ್ಲಿ ಬಳಸುತ್ತಿರುವ ವಿಧಾನಗಳಲ್ಲಿ ನಾಟಿ ವಿಧಾನ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯವಾಗಿದೆ.
ಆದರೆ ಇಲ್ಲಿಯೂ ಜನರಲ್ಲಿ ಕೆಲ ಅನುಮಾನಗಳು ಇವೆ. ತಮ್ಮ ತಲೆಗೆ ಬೇರೊಬ್ಬರ ಕೂದಲನ್ನು ನಾಟಿ ಮಾಡಲಾಗುತ್ತದೆ. ನಾಟಿ ಸಂದರ್ಭದಲ್ಲಿ ರಕ್ತ ಒಸರುವುದರಿಂದ ಮಾರಕ ರೋಗ ಸಹ ಅಂಟಿಕೊಳ್ಳಬಹುದು, ಇದೊಂದು ಕಠಿಣ ವಿಧಾನ ಎಂಬಿತ್ಯಾದಿ ಯೋಚನೆ ಹೊಂದಿದ್ದಾರೆ. ಆದರೆ ಇದೇ ವಿಚಾರದಲ್ಲಿ ತಜ್ಞ ವೈದ್ಯರು ಅಂತಹ ಅನುಮಾನಗಳು ಬೇಡ ಎನ್ನುತ್ತಾರೆ. ತಲೆಯ ಹಿಂಭಾಗದ ಕೂದಲನ್ನೇ ನಾಟಿ ಮಾಡಲಾಗುತ್ತದೆ. ಬೇರೆಯವರ ಕೂದಲನ್ನು ಬಳಸುವುದಿಲ್ಲ. ಈ ಪ್ರಕ್ರಿಯೆ ಅತ್ಯಂತ ಸುಲಭ ಹಾಗೂ ಕ್ರಮಬದ್ಧವಾಗಿ ನಡೆಯುವಂತದ್ದಾಗಿದೆ. ಯಾವುದೇ ಅನುಮಾನ ಬೇಡ. ಇಲ್ಲಿ ಯಾವುದೇ ಅಪಾಯದ ಸಾಧ್ಯತೆ ಇರುವುದಿಲ್ಲ ಎಂದು ಭರವಸೆ ಕೊಡುತ್ತಾರೆ.