ಬೆಂಗಳೂರು: ಒತ್ತಡ ಹೇರಿ ಹಣ ಪಡೆದುಕೊಂಡು ರಾಜಕೀಯ ಜೀವನ ಅಸ್ಥಿರ ಮಾಡಿರುವುದಾಗಿ ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿದ ದೂರಿನ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ಶಂಕಿತ ಆರೋಪಿ ಶ್ರವಣ್ನನ್ನು ವಿಚಾರಣೆ ನಡೆಸಿತು.
ಪ್ರಕರಣದ ತನಿಖೆ ದಿನೇ ದಿನೆ ಹೊಸ ದಿಕ್ಕಿನತ್ತ ಸಾಗುತ್ತಿದೆ. ಒಮ್ಮೆ ಇಬ್ಬರು ಆರೋಪಿಗಳಿಗೆ ಏಕಕಾಲದಲ್ಲಿ ವಿಚಾರಣೆ ನಡೆಸಿದರೆ ಮತ್ತೊಮ್ಮೆ ಇಬ್ಬರಿಗೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಎಥಿಕಲ್ ಹ್ಯಾಕರ್ ಎಂಬ ಆರೋಪ ಹೊತ್ತಿರುವ ಶ್ರವಣ್ಗೆ ಎಸ್ಐಟಿ ತೀವ್ರ ವಿಚಾರಣೆ ನಡೆಸಿ, ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ.
4 ಗಂಟೆ ನಡೀತು ಶ್ರವಣ್ ವಿಚಾರಣೆ!
ಮಾಜಿ ಸಚಿವರು ದಾಖಲಿಸಿದ್ದ ಬ್ಲಾಕ್ ಮೇಲ್ ಕೇಸ್ನ ತನಿಖೆಯನ್ನು ಎಸ್ಐಟಿ ಮತ್ತಷ್ಟು ಚುರುಕುಗೊಳಿಸಿದೆ. ಕಳೆದ ಶನಿವಾರ ನರೇಶ್ ಜೊತೆ ಶ್ರವಣ್ ವಿಚಾರಣೆ ಕೂಡ ನಡೆದಿತ್ತು. ಆದರೆ, ಕೆಲವೊಂದು ಹೆಚ್ಚಿನ ಮಾಹಿತಿ ಅಗತ್ಯವಿದ್ದ ಕಾರಣಕ್ಕೆ ಎಸ್ಐಟಿ ಶ್ರವಣ್ಗೆ 2ನೇ ನೋಟಿಸ್ ನೀಡಿತ್ತು. ಅದರಂತೆ ಇಂದು ಆರೋಪಿ ಶ್ರವಣ್, 2ನೇ ನೋಟಿಸ್ಗೂ ಹಾಜರಾಗಿದ್ದಾನೆ. ಬೆಂಗಳೂರಿನ ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಶ್ರವಣ್ಗೆ ನಾಲ್ಕು ಗಂಟೆಗಳ ಕಾಲ ಎಸ್ಐಟಿ ಸುದೀರ್ಘ ವಿಚಾರಣೆಗೆ ಒಳಪಡಿಸಲಾಯಿತು.