ಕರ್ನಾಟಕ

karnataka

ETV Bharat / state

ಪತ್ನಿಯೊಂದಿಗೆ ಜೀವನ ನಡೆಸುವುದಾಗಿ ಪತಿ ಹೇಳಿಕೆ: ಪೋಷಕರ ಹೇಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥ - ಹೈಕೋರ್ಟ್ ನ್ಯೂಸ್​​

ನಾಪತ್ತೆಯಾಗಿದ್ದ ಪುತ್ರನನ್ನು ಪತ್ತೆ ಹಚ್ಚಲು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಉಡುಪಿ ಮೂಲದ ಹಿರಿಯ ನಾಗರಿಕ-ಪತ್ನಿಯೊಂದಿಗೆ ಜೀವನ ನಡೆಸುವುದಾಗಿ ಪುತ್ರ ಹೇಳಿಕೆ- ಅರ್ಜಿ ಇತ್ಯರ್ಥ ಪಡಿಸಿದ ಹೈಕೋರ್ಟ್

High Court
ಹೈಕೋರ್ಟ್​

By

Published : Feb 7, 2023, 7:39 AM IST

ಬೆಂಗಳೂರು: ಪತ್ನಿ ಮತ್ತು ಆಕೆಯ ಮೊದಲ ಪತಿಗೆ ಜನಿಸಿದ ಮಕ್ಕಳ ಜೊತೆ ಜೀವನ ನಡೆಸುತ್ತಿರುವ ಉಡುಪಿ ಮೂಲದ ಹಿರಿಯ ನಾಗರಿಕರೊಬ್ಬರ ಪುತ್ರನನ್ನು ಪೊಲೀಸರು ಹೈಕೋರ್ಟ್ ಮುಂದೆ ಹಾಜರುಪಡಿಸಿದ್ದು, ಆಕೆಯೊಂದಿಗೆ ಜೀವನ ನಡೆಸುವುದಾಗಿ ಪುತ್ರ ಹೇಳಿಕೆ ನೀಡಿದ ಹಿನ್ನೆಲೆ ಅರ್ಜಿ ಇತ್ಯರ್ಥ ಪಡಿಸಿದೆ.

ಪುತ್ರ ವಿವೇಕಾನಂದ ಶೆಟ್ಟಿಯನ್ನು ಪತ್ತೆ ಮಾಡಿ, ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಉಡುಪಿಯ ಕುಂದಾಪುರದ 63 ವರ್ಷದ ವ್ಯಕ್ತಿಯೊಬ್ಬರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್.ಎಂ ಅಡಿಗ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಪತ್ನಿ ಮತ್ತು ಮಕ್ಕಳ ಜೊತೆ ಜೀವನ ನಡೆಸಲು ಇಚ್ಛಿಸಿರುವುದಾಗಿ ವಿವೇಕಾನಂದ ಶೆಟ್ಟಿ ತಿಳಿಸಿದ ಹಿನ್ನೆಲೆ ನ್ಯಾಯಾಲಯವು ಅವರನ್ನು ಹಾಜರು ಪಡಿಸಲು ಕೋರಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿದೆ.

ಜನವರಿ 24ರಂದು ಪೊಲೀಸರು ವಿವೇಕಾನಂದ ಶೆಟ್ಟಿ, ಅವರ ಪತ್ನಿ ಮತ್ತು ಅವರ 4 ಮತ್ತು 6 ವರ್ಷದ ಇಬ್ಬರು ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ವಿವೇಕಾನಂದ ಅವರ ತಂದೆ, ತಾಯಿ ಮತ್ತು ಸಹೋದರಿಯೂ ಪೀಠದ ಮುಂದೆ ಹಾಜರಿದ್ದರು. ಆಗ ಪೀಠವು ವಿವೇಕಾನಂದ ಅವರನ್ನು ಪ್ರಶ್ನಿಸಲಾಗಿ, ಅದಕ್ಕೆ ಅವರು ಬೆಂಗಳೂರಿನ ಕೋರಮಂಗಲದ ತನ್ನ ಪತ್ನಿ, ಇಬ್ಬರು ಪುತ್ರರ ಜೊತೆ ನೆಲೆಸಲು ಇಚ್ಛೆ ಹೊಂದಿದ್ದೇನೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಅರ್ಜಿ ಇತ್ಯರ್ಥ: ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಒಂದು ವರ್ಷ ಎಂಟು ತಿಂಗಳಿಂದ ವಿವೇಕಾನಂದ ಅವರು ಬೆಂಗಳೂರಿನ ಕೋರಮಂಗಲದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ ಎಂದರು. ಇದನ್ನು ಆಲಿಸಿದ ಪೀಠವು ಸಂಧ್ಯಾ ಅವರು ಮೊದಲ ಪತಿಯಿಂದ ಒಂದು ಗಂಡು ಮಗು ಮತ್ತು ಎರಡನೇ ಪತಿಯಿಂದ ಮತ್ತೊಂದು ಗಂಡು ಮಗು ಪಡೆದಿದ್ದಾರೆ. ಇವರ ಜೊತೆ ವಿವೇಕಾನಂದ ಅವರು ಕೋರಮಂಗಲದಲ್ಲಿ ನೆಲೆಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥ ಪಡಿಸಿತು.

ನಾಪತ್ತೆಯಾಗಿದ್ದ ಪುತ್ರ ವಿವೇಕಾನಂದ ಅವರನ್ನು ಪತ್ತೆ ಹಚ್ಚಲು ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಲಾಗಿತ್ತು ಎಂದು ಆದೇಶದಲ್ಲಿ ದಾಖಲಿಸಲಾಗಿದೆ. ವಿವೇಕಾನಂದ ಅವರು ಪತ್ನಿ ಹಾಗೂ ಪುತ್ರರ ಜೊತೆ ಪತ್ತೆಯಾಗಿರುವುದರಿಂದ ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಏನಿದು ಹೇಬಿಯಸ್ ಕಾರ್ಪಸ್:ಇದು ಒಂದು ರಿಟ್‌ ಅರ್ಜಿ ಅಥವಾ ಕಾನೂನು ಪ್ರಕ್ರಿಯೆ. ಇದರಿಂದ ವ್ಯಕ್ತಿಯೊಬ್ಬನು ಅನ್ಯಾಯಕ್ಕೆ ಅಥವಾ ಇನ್ನೊಬ್ಬ ವ್ಯಕ್ತಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಅಥವಾ ಅದರಿಂದ ಹೊರಬರಲು ಇದನ್ನು ಬಳಸಿಕೊಳ್ಳಬಹುದಾಗಿದೆ.

ಪ್ರಮಾಣಪತ್ರ ಕಾನೂನು ಬಾಹಿರ:ಕೇಂದ್ರ ಮಾಹಿತಿ ಹಕ್ಕು ಆಯೋಗದ ಮುಂದೆ ಸಲ್ಲಿಸಿರುವ ಪ್ರಮಾಣಪತ್ರ ಕಾನೂನು ಬಾಹಿರ ಎಂದು ಘೋಷಣೆ ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಬೆಂಗಳೂರಿನ ಚೆಲುವರಾಜು ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ರೀತಿಯ ಮಾಹಿತಿ ನೀಡುವಂತೆ ಅರ್ಜಿ ಸಲ್ಲಿಸುವುದು ಅಸಂಬದ್ಧ ಎಂದು ನ್ಯಾಯಪೀಠ ತಿಳಿಸಿದೆ.

ಮನವಿ ಅಸಂಬದ್ಧ: ಅರ್ಜಿಯಲ್ಲಿ ಪ್ರತಿವಾದಿಯಾಗಿರುವವರು ಕೇಂದ್ರ ಮಾಹಿತಿ ಹಕ್ಕು ಆಯೋಗದ ಮುಂದೆ ಸಲ್ಲಿಸಿರುವ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಮತ್ತು ಅದನ್ನು ಕಾನೂನು ಬಾಹಿರವೆಂದು ಘೋಷಿಷಣೆ ಮಾಡಬೇಕು ಎಂದು ಕೋರಿದ್ದಾರೆ. ಈ ಮನವಿ ಅಸಂಬದ್ಧ ಎಂದಷ್ಟೇ ಹೇಳಬಹುದು ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರು ಆರ್‌ಟಿಐ ಕಾಯ್ದೆಯಡಿ ಕೆಲವು ಮಾಹಿತಿ ಕೋರಿ ಆಯೋಗದ ಮುಂದೆ ಅರ್ಜಿ ಸಲ್ಲಿಸಿದ್ದರು. ಆ ಕುರಿತಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಲ್ಲಿಸಿದ್ದ ಪ್ರಮಾಣಪತ್ರ ಆಧರಿಸಿ ಅರ್ಜಿದಾರರ ಮನವಿಯನ್ನು ಆಯೋಗ ವಜಾಗೊಳಿಸಿತ್ತು. ಆದರೆ ಅರ್ಜಿದಾರರು ನಿಯಮದಂತೆ ಮಾಹಿತಿ ಹಕ್ಕು ಆಯೋಗದ ಆದೇಶವನ್ನು ಪ್ರಶ್ನಿಸುವ ಬದಲು, ಸಚಿವಾಲಯ ಸಲ್ಲಿಸಿರುವ ಪ್ರಮಾಣ ಪತ್ರವನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಮಗುವನ್ನು ಸುಪರ್ದಿಗೆ ನೀಡದ ತಂದೆಗೆ 25 ಸಾವಿರ ದಂಡ; ತಾಯಿ ಮಡಿಲಿಗೆ ಮಗು ಸೇರಿಸಿದ ಹೈಕೋರ್ಟ್​

ABOUT THE AUTHOR

...view details