ಬೆಂಗಳೂರು: ಯತ್ನಾಳ್ ಆರೋಪದಲ್ಲಿ ನ್ಯಾಯವಿದೆ. ಅವರು ಪಕ್ಷ, ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಸಿಎಂ ಕುಟುಂಬದ ವಿರುದ್ಧ ಯತ್ನಾಳ್ ಆರೋಪದಲ್ಲಿ ನ್ಯಾಯವಿದೆ: ಹೆಚ್.ವಿಶ್ವನಾಥ್ - Yatnal
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂವಿಧಾನದ ಚೌಕಟ್ಟಿನಲ್ಲೇ ಮಾತನಾಡಿದ್ದಾರೆ ಎಂದು ಯತ್ನಾಳ್ ಪರ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಕುಟುಂಬದ ವಿರುದ್ಧ ಯತ್ನಾಳ್ ಆರೋಪ ಮಾಡಿದ್ದಾರೆ. ಜನ ವಿರೋಧಿ ಭಾಷಣಗಳನ್ನೂ ಮಾಡಿಲ್ಲ. ಸರ್ಕಾರದ ರೀತಿ ನೀತಿಗಳ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿಗಳ ಕುಟುಂಬ, ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಮಂತ್ರಿಗಳ ನಿರಾಸಕ್ತಿ, ನಡವಳಿಕೆ ಬಗ್ಗೆ ಹೇಳಿದ್ದಾರೆ. ಪ್ರತಿಪಕ್ಷಗಳೇ ಸುಮ್ಮನಾದರೆ ಮತ್ತಿನ್ನೇನು ಮಾಡಬೇಕು. ಸಿದ್ದರಾಮಯ್ಯ, ಕುಮಾರಸ್ವಾಮಿ ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ವಿವಿಧ ಸಮುದಾಯಗಳ ಮೀಸಲಾತಿ ವಿಚಾರ ಮಾತನಾಡಿ, ರಾಜ್ಯದಲ್ಲಿ ಚಳವಳಿ, ಹೋರಾಟ ಹೆಚ್ಚಾಗ್ತಿದೆ. ಮೇಲ್ವರ್ಗದಿಂದ ಹಿಡಿದು ಎಲ್ಲರೂ ಬೀದಿಗಿಳಿದಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಕೇಳಲು ಅವಕಾಶವಿದೆ. ಜನರಿಗೆ ಸರ್ಕಾರ ತಿಳುವಳಿಕೆ ನೀಡಬೇಕು. ಬರೀ ಮನವಿ ಸ್ವೀಕರಿಸಿದರೆ ಎಲ್ಲವೂ ಮುಗಿಯಲ್ಲ. ಸರ್ಕಾರ ಯಾವ ವಿಚಾರದಲ್ಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಪಂಚಮಸಾಲಿ ಯತಿಗಳು ಈಗಲೇ ಘೋಷಿಸಬೇಕು ಅಂತಾರೆ. ಕುರುಬ ಸಮುದಾಯ ಕೂಡ ಮೀಸಲಾತಿ ಕೇಳುತ್ತಿದೆ. ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಸರ್ಕಾರ ನಮಗೆ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.