ಬೆಂಗಳೂರು:ಎಂಎಲ್ಸಿಯಾದರೂ ಕೂಡ ಶಾಸಕ ಸ್ಥಾನದ ಅನರ್ಹತೆ ಮುಂದುವರಿಸಿ ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಉದ್ದೇಶಿಸಿದ್ದೇನೆ. ಸಚಿವ ಸ್ಥಾನಕ್ಕೆ ನಾನು ಕಾಯುತ್ತಿದ್ದೇನೆ ಎಂದಲ್ಲ. ನಾನು ರಾಜಕಾರಣವನ್ನು ವ್ಯವಹಾರವಾಗಿ ತೆಗೆದುಕೊಂಡಿಲ್ಲ. ಸಾಂಸ್ಕೃತಿಕ ಹೋರಾಟವಾಗಿ ತೆಗೆದುಕೊಂಡವನು. ಸಚಿವನಾಗಿ ನನ್ನ ಕಾರ್ಯವೈಖರಿ ಜನತೆಗೆ ಗೊತ್ತಿದೆ' ಎಂದರು.
'ಕಾನೂನು ಹೋರಾಟಕ್ಕೆ ಸಾಥ್ ಸಿಗಲಿಲ್ಲ'
'ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೂನ್ನಲ್ಲಿ ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿತ್ತು. ವಾಪಸ್ ಬಂದಾಗ ನನ್ನ ಹೆಸರು ಕೈ ಬಿಟ್ಟು ಹೋಗಿತ್ತು. ಯಾಕೆ ಅಂತಾ ತಿಳಿಯಲಿಲ್ಲ. ಹಾಗೆ ನೋಡಿದರೆ ಸಂಘ ಪರಿವಾರದಿಂದ ನನಗೆ ಹೆಚ್ಚು ಸಹಕಾರ ಸಿಕ್ಕಿತ್ತು. ಆದರೆ ಈಗ ಕೋರ್ಟ್ಗೆ ವಿಷಯ ಹೋದಾಗ ನಮಗೆ ಸಿಗಬೇಕಾದ ಸಹಕಾರ ಸಿಗಲಿಲ್ಲ. ಅಡ್ವೊಕೇಟ್ ಜನರಲ್ ಸರಿಯಾಗಿ ಮಾತನಾಡಿಸಲೂ ಅನಾದರ ತೋರಿಸಿದರು. ಯಾಕೆ ಹೀಗಾಯ್ತು ಅಂತಾ ಗೊತ್ತಾಗುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.