ಬೆಂಗಳೂರು: ನಾನು ಚುನಾವಣೆಯಲ್ಲಿ ಸೋತಿರಬಹುದು, ಅದರೆ ನಮ್ಮ ಉದ್ದೇಶ ಗೆದ್ದಿದೆ. ನಾನು ಯಾವುದೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪನವರೇ ನಮಗೆ ಹೈಕಮಾಂಡ್ ಎಂದು ಮಾಜಿ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮಾಜಿ ಸಚಿವ ಹೆಚ್. ವಿಶ್ವನಾಥ್ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಮುಳುಗಿಸುವವರು ಮುಳುಗುವ ಮುನ್ನ ನಾಯಕತ್ವದಿಂದ ಹೊರ ಹೋಗಿದ್ದು ಕಾಂಗ್ರೆಸ್ ಪಕ್ಷದ ಭಾಗ್ಯ. ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಗ್ಗೆ ಗೌರವವಿದೆ. ಆದರೆ, ಆ ಪಕ್ಷದ ನಾಯಕತ್ವದ ಬಗ್ಗೆ ನನಗೆ ಬೇಸರವಿದೆ ಎಂದರು.
ರಾಜಕಾರಣ ಮತ್ತು ರಾಜಕಾರಣಿಗಳಿಗೆ ಸಾವಿಲ್ಲ. ನಾನು ಮೂರು ವರ್ಷದಲ್ಲಿ ಮೂರು ಪಕ್ಷ ಬದಲಿಸಿದ್ದಾರೆ ಎನ್ನುತ್ತಾರೆ. 40 ವರ್ಷ ಕಾಂಗ್ರೆಸ್‌ನಲ್ಲಿ ನಾನು ಸಕ್ರಿಯನಾಗಿದ್ದೆ. ಬಲವಾದ ಕಾರಣದಿಂದ ಅಯೋಗ್ಯ ಸರ್ಕಾರವನ್ನ ಕಿತ್ತೊಗೆಯಲು ಪಕ್ಷ ಬದಲಿಸಬೇಕಾಯ್ತು ಎಂದು ವಿಶ್ವನಾಥ್ ವಿವರಿಸಿದ್ರು.
ಸಿದ್ದರಾಮಯ್ಯನವರು ಆರು ಬಾರಿ ಪಕ್ಷಾಂತರ ಮಾಡಿದ್ದಾರೆ. ರಮೇಶ್ ಕುಮಾರ್ ಒಂಭತ್ತು ಬಾರಿ ಪಕ್ಷ ಬದಲಿಸಿದ್ದಾರೆ. ಹಾಗಾದ್ರೆ ಅವರದ್ದು ಪಕ್ಷಾಂತರವಲ್ಲದೆ ಮತ್ತೇನು?.ಸಿದ್ದರಾಮಯ್ಯ ನಾನು ಅಣ್ಣತಮ್ಮನಿದ್ದಂತೆ. ನಾವಿಬ್ಬರು ಕುರುಬ ಸಮುದಾಯದವರು. ಯಾವತ್ತೂ ಅಣ್ಣನನ್ನು ತಮ್ಮ ಬೆಳೆಯೋದಕ್ಕೆ ಬಿಡೋದಿಲ್ಲ. ಸಿದ್ದರಾಮಯ್ಯ ಜೊತೆ ದಾಯದಿ ಕಲಹವಿದ್ರೆ ತೊಂದರೆ ಇರುತ್ತಿರಲಿಲ್ಲ. ಆದರೆ, ಇದು ಅಣ್ಣ-ತಮ್ಮನ ಕಿತ್ತಾಟ ಎಂದು ವಿಶ್ವನಾಥ ಕುಟುಕಿದರು.