ಬೆಂಗಳೂರು:ಹುಣಸೂರು ಉಪಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಯಾಗಿದ್ದ ಎಚ್. ವಿಶ್ವನಾಥ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದ ಅಡಿ ತನಿಖೆ ನಡೆಸಬೇಕು ಎಂದು ಎಸಿಬಿಗೆ ಇಂದು ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ವೈ. ಪುಟ್ಟರಾಜು ದೂರು ನೀಡಿದ್ದಾರೆ.
ದೂರಿನ ಪ್ರತಿಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಸಿ.ಪಿ. ಯೋಗೇಶ್ವರ್ ಮತ್ತು ಎನ್.ಆರ್. ಸಂತೋಷ್ ಮೂಲಕ ಇಪ್ಪತ್ತೈದು ಕೋಟಿ ರೂ. ಹಣ ವಿಶ್ವನಾಥ್ ಅವರಿಗೆ ನೀಡಿದ್ದಾರೆ. ಇದನ್ನ ಸ್ವತಃ ವಿಶ್ವನಾಥ್ ಅವರೇ ಒಪ್ಪಿದ್ದಾರೆ. ಇದು ಭ್ರಷ್ಟಾಚಾರದಿಂದ ಗಳಿಸಿರುವ ಹಣವಾಗಿದೆ. ಹೀಗಾಗಿ ಇದನ್ನ ಭ್ರಷ್ಟಾಚಾರ ಪ್ರಕರಣದಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ಸಿ.ಪಿ. ಯೋಗೇಶ್ವರ್ ಮತ್ತು ಎನ್.ಆರ್. ಸಂತೋಷ್ ಮೂಲಕ ವಿಶ್ವನಾಥ್ ಅವರಿಗೆ ಹಣ ಕಳಿಸಿರುವುದು ಅನಧಿಕೃತ. ಹಾಗೆ ಭ್ರಷ್ಣಾಚಾರದಿಂದ ಸಂಪದಾನೆ ಮಾಡಿದ ಹಣವಾಗಿದೆ. ಹೀಗಾಗಿ ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಇನ್ನಿತರರು ಭಾಗಿಯಾಗಿದ್ದಾರೆ. ಇವರ ವಿರುದ್ಧ ಪ್ರಿವೆನ್ಸನ್ ಕರಪ್ಸನ್ ಆ್ಯಕ್ಟ್ ಮನಿ ಲೆಂಡರ್ ಜನತಾ ಪ್ರಾತಿನಿಧ್ಯ ಕಾಯ್ದೆ 1951, ಐಪಿಸಿ ಸೆಕ್ಷನ್ ಮುಖಾಂತರ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ರಾಜ್ಯ ಬಂದ್ ಮಾಡಿದ್ರೆ ಕಠಿಣ ಕ್ರಮ: ಬಸವರಾಜ್ ಬೊಮ್ಮಾಯಿ ಎಚ್ಚರಿಕೆ
ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಮಾತನಾಡಿ, 25 ಕೋಟಿ ರೂ. ಹಣ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಎಲ್ಲ ಹಣ ಎಲ್ಲಿಂದ ಬಂತು. ಇದೆಲ್ಲವೂ ಭ್ರಷ್ಟಾಚಾರದಿಂದ ಬಂದ ಹಣವೇ ಎಂಬ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಎಸಿಬಿಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ.