ಕರ್ನಾಟಕ

karnataka

ETV Bharat / state

ಸಚಿವ ಸ್ಥಾನದಿಂದ ವಂಚಿತರಾದ ಹೆಚ್.ವಿಶ್ವನಾಥ್: ಎಂಎಲ್​ಸಿ ಸ್ಥಾನಕ್ಕೂ ಬರುತ್ತಾ ಕುತ್ತು? - H. Vishwanath didnot get the ministerial post

ಎಂಎಲ್​ಸಿ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದಂತೆ ಹೈಕೋರ್ಟ್ ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಹಾಗಾಗಿ ಅವರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಭವಿಷ್ಯದಲ್ಲಿ ಒಂದು ವೇಳೆ ಹೆಚ್.ವಿಶ್ವನಾಥ್ ಅವರನ್ನು ಎಂಎಲ್​ಸಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವುದನ್ನು ಪ್ರಶ್ನಿಸಿದರೆ, ಅವರು ಈಗಿರುವ ಹುದ್ದೆಯನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅನರ್ಹಗೊಂಡಿರುವ ಶಾಸಕ ಎಚ್. ವಿಶ್ವನಾಥ್
ಅನರ್ಹಗೊಂಡಿರುವ ಶಾಸಕ ಎಚ್. ವಿಶ್ವನಾಥ್

By

Published : Nov 30, 2020, 6:44 PM IST

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿರುವ ಬೆನ್ನಲ್ಲೇ ಇದೀಗ ಅವರನ್ನು ನಾಮನಿರ್ದೇಶನ ಮಾಡಿರುವ ಪರಿಷತ್ ಸ್ಥಾನಕ್ಕೂ ಕುತ್ತು ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಪಕ್ಷಾಂತರ ಮಾಡಿದ ಪ್ರಕರಣದಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಹೆಚ್​.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್​​.ಶಂಕರ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಈಗಾಗಲೇ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದಂತೆ ಸೂಚಿಸಿದೆ.

ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ಹೆಚ್.ವಿಶ್ವನಾಥ್​​ಗೆ ಸಚಿವ ಸ್ಥಾನ ನೀಡಬಾರದು ಎಂದು ನೇರವಾಗಿ ಆದೇಶಿಸಿಲ್ಲದಿದ್ದರೂ ಸಚಿವರ ಹೆಸರುಗಳನ್ನು ರಾಜ್ಯಪಾಲರಿಗೆ ಸೂಚಿಸುವಾಗ ಅವರಿನ್ನೂ ಅನರ್ಹರು ಎಂಬುದನ್ನು ಪರಿಗಣಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಅದರಂತೆ ಹೆಚ್.ವಿಶ್ವನಾಥ್ ಸಚಿವ ಸ್ಥಾನದಿಂದ ದೂರವಾಗಿದ್ದಾರೆ.

ರಾಜ್ಯದಲ್ಲಿ 2 ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಆಯೋಗದ ಘೋಷಣೆ

ಮಧ್ಯಂತರ ಆದೇಶ ಪ್ರಕಟಿಸಿದ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರೊಬ್ಬರು ವಾದಿಸಿ, ಹೆಚ್.ವಿಶ್ವನಾಥ್ ಅನರ್ಹರಾಗಿರುವುದರಿಂದ ಮುಂದಿನ ಅಧಿವೇಶನದಲ್ಲಿ ಭಾಗವಹಿಸದಂತೆ ನಿರ್ದೇಶಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿಯಲ್ಲಿ ಸಚಿವ ಸ್ಥಾನ ನೀಡಬಾರದು ಎಂದಷ್ಟೇ ಕೋರಿದ್ದಾರೆ. ಅದನ್ನು ಪರಿಗಣಿಸಿ ಮಧ್ಯಂತರ ಆದೇಶ ನೀಡಲಾಗಿದೆ. ಈ ಸಂದರ್ಭದಲ್ಲಿ ಅವರ ಆಯ್ಕೆಯನ್ನು ಪ್ರಶ್ನಿಸಲಾಗದು ಎಂದು ಹೇಳಿದೆ.

ಸಂವಿಧಾನದ ವಿಧಿ 361(ಬಿ) ಪ್ರಕಾರ ಸರ್ಕಾರದ ಯಾವುದೇ ಅನರ್ಹ ಶಾಸಕರು ತಮ್ಮ ಅನರ್ಹತೆ ಅವಧಿ ಮುಗಿಯುವರೆಗೆ ಅಥವಾ ಚುನಾವಣೆಯಲ್ಲಿ ಆಯ್ಕೆಯಾಗುವವರೆಗೆ ಸಂಭಾವನೆ ತೆಗೆದುಕೊಳ್ಳುವಂತಹ ರಾಜಕೀಯ ಹುದ್ದೆಯನ್ನು ಪಡೆಯುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅನರ್ಹತೆ ಮುಂದುವರೆದಿರುವ ಸಂದರ್ಭದಲ್ಲಿ ಅವರನ್ನು ಸಂಭಾವನೆ ನೀಡುವಂತಹ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವುದು ಕೂಡ ಪ್ರಶ್ನಾರ್ಹವಾಗಿದೆ. ಹೀಗಾಗಿ ಭವಿಷ್ಯದಲ್ಲಿ ಹೆಚ್.ವಿಶ್ವನಾಥ್ ಅವರಿಗೆ ಎಂಎಲ್​ಸಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವುದನ್ನು ಪ್ರಶ್ನಿಸಿದರೆ ಅವರು ಈಗಿರುವ ಹುದ್ದೆಯನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ABOUT THE AUTHOR

...view details