ಬೆಂಗಳೂರು/ಗಂಗಾವತಿ:ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ಮಾಜಿ ಶಾಸಕ ಹೆಚ್.ಆರ್ ಶ್ರೀನಾಥ್ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ, ಶಾಸಕರಾದ ಅಮರೇಗೌಡ ಭೈಯಾಪುರ, ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಕಾಜರ್ಜುನ ನಾಗಪ್ಪ, ಮಾಜಿ ಶಾಸಕ ಕರಿಯಣ್ಣ ಸಂಗಟಿ ಇತರರು ಪಾಲ್ಗೊಂಡಿದ್ದರು.
ಇದನ್ನು ಓದಿ:ಕುಂದಾಪುರ ಬಳಿ ಹೆದ್ದಾರಿಯಿಂದ ಸಮುದ್ರಕ್ಕೆ ಹಾರಿದ ಕಾರು: ಓರ್ವ ಸಾವು, ಮತ್ತೋರ್ವ ನಾಪತ್ತೆ
ಡಿ.ಕೆ. ಶಿವಕುಮಾರ್ ಮಾತನಾಡಿ, ಇಂದು ಕೊಪ್ಪಳ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷವಾದ ದಿನ. ಗಾಂಧಿ ಕುಟುಂಬದ ಜತೆ ಹೆಚ್.ಜಿ. ರಾಮುಲು ಕುಟುಂಬ ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಇಂದಿರಾ ಗಾಂಧಿ ಅವರು ಅನೇಕ ಬಾರಿ ಇವರ ಮನೆಗೆ ಭೇಟಿ ನೀಡಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಕಾರಣಾಂತರಗಳಿಂದ ಅವರು ಪಕ್ಷ ತೊರೆದಿದ್ದರು. ಕಳೆದ ಏಳೆಂಟು ತಿಂಗಳ ಹಿಂದೆ ನಾನು ಶ್ರೀನಾಥ್ ಅವರ ತಂದೆ ರಾಮುಲು ಅವರನ್ನು ಭೇಟಿ ಮಾಡಿ ಹಳೇ ಕಹಿ ಘಟನೆಗಳನ್ನು ಮರೆತು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎಂದು ಕೇಳಿದ್ದೆ. ಎಸ್.ಎಂ. ಕೃಷ್ಣ ಅವರು ಸಿಎಂ ಆಗುವ ಮುನ್ನ ಸೋನಿಯಾ ಗಾಂಧಿ ಅವರು ನನಗೆ ಮೂರು ಕುಟುಂಬಗಳನ್ನು ಭೇಟಿ ಮಾಡಲು ಸೂಚಿಸಿದ್ದರು. ಅವುಗಳಲ್ಲಿ ಒಂದು ಹೆಚ್.ಜಿ ರಾಮುಲು ಅವರ ಕುಟುಂಬ. ನಾನು ಮತ್ತು ಕೃಷ್ಣ ಅವರು ಇವರ ಮನೆಗೆ ಭೇಟಿ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದೆವು. ಇವರ ಕುಟುಂಬದ ಜತೆಗೆ ಉಳಿದ ಎರಡು ಕುಟುಂಬಗಳೆಂದರೆ ಮುರುಘಾ ಗೋವಿಂದ ರೆಡ್ಡಿ ಹಾಗೂ ಸಚ್ಚಿದಾನಂದ ಸ್ವಾಮಿ ಅವರ ಕುಟುಂಬ. ಶ್ರೀನಾಥ್ ಅವರು ಯಾವ ಷರತ್ತೂ ಇಲ್ಲದೇ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂಬ ಒಂದು ಷರತ್ತನ್ನು ಮಾತ್ರ ನಾವು ಹಾಕಿದ್ದೇವೆ ಎಂದರು.
ಕಾಂಗ್ರೆಸ್ ಸೇರ್ಪಡೆಯಾದ ಹೆಚ್.ಆರ್ ಶ್ರೀನಾಥ್ ನಮ್ಮ ಸಮೀಕ್ಷೆ ಪ್ರಕಾರ ಈ ಬಾರಿ ಕೊಪ್ಪಳ ಜಿಲ್ಲೆಯ ಐದಕ್ಕೆ ಐದು ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಲಿದೆ. ಇದನ್ನು ನಿಜ ಮಾಡಲು ನೀವೆಲ್ಲರೂ ಕೆಲಸ ಮಾಡಬೇಕು. ಶ್ರೀನಾಥ್ ಹಾಗೂ ಅವರ ಕುಟುಂಬ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಈ ಸೇರ್ಪಡೆ ವಿಚಾರವಾಗಿ ಎಲ್ಲೂ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಶ್ರೀನಾಥ್ ಹಾಗೂ ಅವರ ಸಹೋದ್ಯೋಗಿಗಳು ಹಾಗೂ ಬೆಂಬಲಿಗರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಶ್ರೀನಾಥ್ ಅವರ ಸೇರ್ಪಡೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಭರವಸೆ ಇದೆ. ಅನ್ಸಾರಿ ಅವರು ನೂರಕ್ಕೆ ನೂರು ಗೆಲ್ಲುತ್ತಾರೆ. ನಿಮ್ಮೆಲ್ಲರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ ಎಂದರು.
ಹೆಚ್. ಜಿ. ಶ್ರೀನಾಥ್ ಮಾತನಾಡಿ, ಇಂದು ಬಹಳ ಸಂತೋಷದ ದಿನ. ನಾನು ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇವೆ. ಕಾಂಗ್ರೆಸ್ ನಮ್ಮ ರಕ್ತದಲ್ಲಿ ಹರಿಯುತ್ತಿದೆ. ನಮ್ಮ ತಂದೆ ಇಂದಿರಾ ಗಾಂಧಿ ಅವರಿಗೆ ಆತ್ಮೀಯರಾಗಿದ್ದರು. ಅವರು ರಾಜ್ಯಕ್ಕೆ ಬಂದಾಗ ಅನೇಕ ಬಾರಿ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ಬಿಜೆಪಿಗೆ ಸೇರ್ಪಡೆ ಆಗುವಂತೆ ಅಮಿತ್ ಶಾ ಅವರು ಆಹ್ವಾನ ನೀಡಿದ್ದರು. ಆದ್ರೆ ಜಾತ್ಯಾತೀತ ಸಿದ್ಧಾಂತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರುತ್ತಿದ್ದೇವೆ. ಕೊಪ್ಪಳದಲ್ಲಿ ಬಿಜೆಪಿಯವರು ಕೋಮುವಾದ ಆರಂಭಿಸಿದ್ದಾರೆ. ಮಸೀದಿಗಳಲ್ಲಿ ಲಿಂಗ ಇದೇ ಎಂದು ತಗಾದೆ ಎತ್ತಿದ್ದಾರೆ. ಅಯೋಧ್ಯೆ ನಂತರ ದಕ್ಷಿಣದಲ್ಲಿ ಅಂಜನಾದ್ರಿ ವಿಚಾರ ಇಟ್ಟುಕೊಂಡು ರಾಜ್ಯಕ್ಕೆ ಪ್ರವೇಶಿಸಲು ಮುಂದಾಗಿದ್ದಾರೆ. ಅಂಜನಾದ್ರಿ ಎಲ್ಲಾ ವರ್ಗದವರಿಗೂ ಸೇರುವ ಕ್ಷೇತ್ರ ಎಂದು ತಿಳಿಸಿದರು.