ಬೆಂಗಳೂರು :ಎಪಿಎಂಸಿ ತಿದ್ದುಪಡಿ ಕಾನೂನು ಕುರಿತಾಗಿ ಸುಗ್ರೀವಾಜ್ಞೆ ಬೇಡ. ಶೋಷಣೆ ಮುಕ್ತ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ನಿರ್ಮಾಣ ಪ್ರಯತ್ನಕ್ಕೆ ತಿಲಾಂಜಲಿ ನೀಡುವುದನ್ನು ಕೈಬಿಡಿ ಎಂದು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ 1966 ತಿದ್ದುಪಡಿ ಮಾಡಲು ಸುಗ್ರೀವಾಜ್ಞೆ ತರಲು ಇಂದು ತಮ್ಮ ಸಚಿವ ಸಂಪುಟದಲ್ಲಿ ವಿಷಯ ಇರಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಓದಿ ತಿಳಿದೆ. ಮುಗ್ಧ ರೈತರ ಶೋಷಣೆ ಮಾಡಿದವರಿಗೆ ದಂಡ, ಶಿಕ್ಷೆಗೆ ಅವಕಾಶ ಮಾಡಿದ್ದ ಕಲಂ 117 ತಿದ್ದುಪಡಿಗೊಳಿಸುವ ತರಾತುರಿಯಲ್ಲಿ ಸರ್ಕಾರವಿದ್ದಂತಿದೆ. ಕೇಂದ್ರದ ಕೆಲವು ಅಧಿಕಾರಿಗಳು ಈ ತಿದ್ದುಪಡಿಗೆ ನಿರ್ದೇಶನ ನೀಡಿದ್ದಾರೆಂದು ಅಲ್ಲಲ್ಲಿ ಬಂದ ಟೀಕೆ ಟಿಪ್ಪಣಿಯಿಂದ ಅರಿತೆ. ಈ ತಿದ್ದುಪಡಿಯು ರೈತರ ಮೇಲೆ ಯಾವ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅರಿಯದೇ ಈ ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದಿದ್ದಾರೆ.