ಕರ್ನಾಟಕ

karnataka

ETV Bharat / state

ವಿಪಕ್ಷ ನಾಯಕನಿಲ್ಲದೇ ರಾಜ್ಯಪಾಲರ ಭಾಷಣ ನಡೆದಿದ್ದು ದುರ್ದೈವ, ಸದನದ ಘನತೆಗೆ ಧಕ್ಕೆಯಾಗಿದೆ: ಹೆಚ್.​ಕೆ ಪಾಟೀಲ್ - ಸಚಿವ ಈಶ್ವರ್ ಖಂಡ್ರೆ

ಬಿಜೆಪಿಯ ಜನ ವಿರೋಧಿ ಕೆಲ ಕಾನೂನುಗಳನ್ನು ವಾಪಸ್ ಪಡೆಯುವಂತಹ ಪ್ರಕ್ರಿಯೆಯನ್ನು ಬಹಳ ಬೇಗನೆ ಪ್ರಾರಂಭಿಸುತ್ತೇವೆ ಎಂದು ಸಚಿವ ಹೆಚ್​ ಕೆ ಪಾಟೀಲ್ ತಿಳಿಸಿದ್ದಾರೆ.

h-k-patil-reaction-on-opposition-leader
ವಿಪಕ್ಷ ನಾಯಕನಿಲ್ಲದೇ ರಾಜ್ಯಪಾಲರ ಭಾಷಣ ನಡೆದಿದ್ದು ದುರ್ದೈವ, ಸದನದ ಘನತೆ ಧಕ್ಕೆಯಾಗಿದೆ: ಹೆಚ್.​ಕೆ ಪಾಟೀಲ್

By

Published : Jul 3, 2023, 6:59 PM IST

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವ ದಿಸೆಯಲ್ಲಿ ಹೋಗುತ್ತದೆ ಎಂಬುದನ್ನ ರಾಜ್ಯಪಾಲರ ಭಾಷಣದ ಮೂಲಕ ತಿಳಿಸಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​ ಕೆ ಪಾಟೀಲ್ ಹೇಳಿದ್ದಾರೆ. ವಿಧಾನಸೌಧದ ಹೈಕೋರ್ಟ್ ಗೇಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಐದು ಗ್ಯಾರಂಟಿಗಳ ಸದುದ್ದೇಶಗಳ ಬಗ್ಗೆ ಗ್ಯಾರಂಟಿಗಳ ಅನುಷ್ಠಾನ ಬಗೆಗಿನ ಬದ್ಧತೆ ಹಾಗೂ ಜನಪರವಾದ ಕಾಳಜಿಯನ್ನ ರಾಜ್ಯಪಾಲರು ತಿಳಿಸಿದ್ದಾರೆ. ದೀನ ದಲಿತರು ಹಿಂದುಳಿದ ವರ್ಗಗಳು ಅಲ್ಪಸಂಖ್ಯಾತರು ಎಲ್ಲರನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಮನಸ್ಸನ್ನು ಕೂಡಿಸುವ ಎಲ್ಲ ವರ್ಗಗಳಿಗೂ ಗೌರವಿಸುವಂತಹ ಸಂದೇಶ ನೀಡಿದ್ದೇವೆ ಎಂದು ಹೇಳಿದರು.

ಸರ್ಕಾರ ಮಾಡಬೇಕಾದ ಕರ್ತವ್ಯ ಆ ಹೆಜ್ಜೆಗಳ ಸೂಕ್ಷ್ಮ ಪರಿಚಯವನ್ನು ರಾಜ್ಯಪಾಲರು ಮಾಡಿದ್ದಾರೆ. ಪ್ರವಾಸೋದ್ಯಮ ಶಿಕ್ಷಣ ಎಲ್ಲದರ ಬಗ್ಗೆ ಮಹತ್ವ ಕೊಟ್ಟಿದ್ದಾರೆ. ಪ್ರೀತಿಯನ್ನು ಬೆಳೆಸಿ ದ್ವೇಷ ಅಳಿಸುವಂತಹ ಕಾರ್ಯಕ್ರಮ ಕೊಡುವ ಭರವಸೆಯನ್ನು ರಾಜ್ಯಪಾಲರ ಭಾಷಣದ ಮೂಲಕ ನಾವು ನೀಡಿದ್ದೇವೆ. ಬಿಜೆಪಿಯ ಜನ ವಿರೋಧಿ ಕಾನೂನು ವಾಪಸ್ ಪಡೆಯುವ ವಿಚಾರ ಮಾತನಾಡಿ, ಬಿಜೆಪಿಯ ಜನ ವಿರೋಧಿ ಕಾನೂನುಗಳನ್ನ ವಾಪಸ್ ಪಡೆಯುವಂತಹ ಚಿಂತನೆ‌ ಇದೆ. ಕೆಲ ಕಾನೂನುಗಳನ್ನ ವಾಪಸ್ ಪಡೆಯುವಂತಹ ಪ್ರಕ್ರಿಯೆಯನ್ನು ಬಹಳ ಬೇಗನೆ ಪ್ರಾರಂಭಿಸುತ್ತೇವೆ. ಕಲಾಪ ಸಲಹಾ ಸಮಿತಿ ಸಭೆ ಬಳಿಕ ತೀರ್ಮಾನಿಸುತ್ತೇವೆ ಎಂದರು.

ಇತಿಹಾಸದಲ್ಲಿ ಮೊದಲ ಬಾರಿ ಪ್ರತಿಪಕ್ಷದ ನಾಯಕನಿಲ್ಲದೇ ರಾಜ್ಯಪಾಲರ ಭಾಷಣ ನಡೆದಿದೆ. ಇದು ದುರ್ದೈವ. ನಮ್ಮ ಸದನದಲ್ಲಿ ಯಾವಾಗಲೂ ಪ್ರತಿಪಕ್ಷ ನಾಯಕರು ಇದ್ದೇ ಇರುತ್ತಿದ್ದರು. ಈಗ ನಮ್ಮ ರಾಜ್ಯಪಾಲರ ಭಾಷಣಕ್ಕೆ ಪ್ರತಿಪಕ್ಷದ ನಾಯಕರು ಇಲ್ಲದೇ ಭಾಷಣ ಆಗಿದೆ. ಇದು ಒಳ್ಳೆಯ, ಆರೋಗ್ಯಕರ ಬೆಳವಣಿಗೆ ಅಲ್ಲ. ಅದು ಅವರ ಪಕ್ಷದ ವಿಚಾರ ಇರಬಹುದು. ಆದರೆ, ಸದನದ ಘನತೆ ಮತ್ತು ಸಂಸ್ಕೃತಿ, ಪರಂಪರೆಗೆ ಧಕ್ಕೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ..

ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದ ಮಿತ್ರ ಧ್ರುವನಾರಾಯಣ್:ಅಕಾಲಿಕವಾಗಿ ಅಗಲಿದ ಧ್ರುವನಾರಾಯಣ್ ಅವರು ವಿಶಿಷ್ಟ ವ್ಯಕ್ತಿತ್ವದ ನಾಯಕರಾಗಿದ್ದರು. ಎಲ್ಲ ಜಾತಿ, ಧರ್ಮ, ಭಾಷೆಯ ಜನರನ್ನು ಸಮಾನವಾಗಿ ಕಂಡು, ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು. ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಅವರು, ಧ್ರುವ ನಾರಾಯಣ್ ಅಜಾತಶತ್ರುವಾಗಿದ್ದರು ಎಂದರು.

ತಮ್ಮ ರಾಜಕೀಯ ಬದುಕಿನಲ್ಲಿ ಅವರು ಅಕ್ಷರಶಃ ಸರ್ವಧರ್ಮ ಸಹಿಷ್ಣುತೆ, ಸಹಬಾಳ್ವೆಯಂತೆ ನಡೆದಿದ್ದಾರೆ. ಅವರಿಗೆ ಯಾವುದೇ ಹುದ್ದೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಸಂಸದರಾಗಿ ಅವರು ಈ ನೆಲದ ಜ್ವಲಂತ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದರು. ಈ ನಾಡಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶಾಸಕರಾಗಿಯೂ ಅವರು, ಉತ್ತಮ ಕಾರ್ಯ ಮಾಡಿದ್ದಾರೆ. ಸಂಘಟನಾ ಚತರುರರಾಗಿದ್ದ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದೇನೆ. ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ಳುತ್ತಾನೆ. ಹೀಗಾಗಿ ಧ್ರುವ ನಾರಾಯಣ್ ನಮ್ಮನ್ನು ಅಗಲಿದ್ದಾರೆ ಎಂದು ತಿಳಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಕಳೆದ ಅಧಿವೇಶನದಿಂದ ಈ ಅಧಿವೇಶನದ ಅವಧಿಯಲ್ಲಿ ಅಗಲಿದ ಅಂಜನಮೂರ್ತಿ, ಡಿ.ಬಿ. ಇನಾಂದಾರ್, ವೆಂಕಟಸ್ವಾಮಿ, ಕೆ. ಭುಜಂಗಶೆಟ್ಟಿ ಮೊದಲಾದವರು ತಮ್ಮ ತಮ್ಮ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಇವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

ABOUT THE AUTHOR

...view details