ಬೆಂಗಳೂರು:ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಗೆಲುವಿನ ವಿಶ್ವಾಸವಿಲ್ಲದ ಕಾರಣ ವಿಧಾನಮಂಡಲದ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸಲಾಗಿದೆ. ಸರ್ಕಾರ ಮುಂದುವರೆಯುತ್ತದೆಯೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಹಾಗೂ ಅವರ ಮಂತ್ರಿ ಮಂಡಲಕ್ಕೆ ಕಾರ್ಮೋಡ ಕವಿದಿದೆ ಎಂದರು. ಕಳೆದ ಅಧಿವೇಶನದಲ್ಲೇ ಪೂರ್ಣ ಪ್ರಮಾಣದ ಬಜೆಟ್ಗೆ ಒಪ್ಪಿಗೆ ಪಡೆಯಬಹುದಿತ್ತು. ಆದರೆ, ಮತ್ತೊಂದು ಬಜೆಟ್ ಮಂಡಿಸುವ ಉದ್ದೇಶದಿಂದ ಲೇಖಾನುದಾನ ಪಡೆಯಲಾಗಿತ್ತು. ಈಗ ವಿಧಾನಸಭೆ ಉಪಚುನಾವಣೆ ನೀತಿಸಂಹಿತೆ ನೆಪವೊಡ್ಡಿ ಹತ್ತು ದಿನಗಳ ಕಾಲ ಕರೆಯಲಾಗಿದ್ದ ಅಧಿವೇಶನವನ್ನು ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.