ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ನಗರದ ಬೆನ್ಸನ್ ಟೌನ್ನಲ್ಲಿರುವ ಇಬ್ರಾಹಿಂ ನಿವಾಸಕ್ಕೆ ಇಂದು ಭೇಟಿ ನೀಡಿದ ಕುಮಾರಸ್ವಾಮಿ, ಕೆಲ ಸಮಯ ಮಾತುಕತೆ ನಡೆಸಿದರು. ಈ ಹಿಂದೆ ಜೆಡಿಎಸ್ನಲ್ಲೇ ಇದ್ದ ಇಬ್ರಾಹಿಂ ಅವರಿಗೆ ಪಕ್ಷಕ್ಕೆ ಮರಳಿ ಬರುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಇಬ್ರಾಹಿಂ ಭೇಟಿ ಬಳಿಕ ಮಾತನಾಡಿದ ಕುಮಾರಸ್ವಾಮಿ, ಇಬ್ರಾಹಿಂ ಅವರು ನಮ್ಮ ಸ್ನೇಹಿತರಲ್ಲ, ಅವರು ನಮ್ಮ ಕುಟುಂಬದ ಹಿರಿಯ ಸಹೋದರ ಇದ್ದಂತೆ. ನಾನು ರಾಜಕಾರಣಕ್ಕೆ ಬರುವ ಮುನ್ನವೇ ದೇವೇಗೌಡರ ಜೊತೆ ಇಬ್ರಾಹಿಂ ಇದ್ದರು. ಅವರು ಯಾವುದೇ ಪಕ್ಷದಲ್ಲಿ ಇದ್ದರೂ ಅವರು ನಮ್ಮ ಕುಟುಂಬದ ಹಿರಿಯ ಸದಸ್ಯ. 2004ರಲ್ಲಿ ನಮ್ಮ ಪಕ್ಷದಿಂದ ದೂರವಾದರೂ ಆತ್ಮೀಯ ಸಂಬಂಧ ಇತ್ತು ಎಂದು ಹೇಳಿದರು.
ರಾಜಕೀಯ ವಿಚಾರವನ್ನು ಚರ್ಚೆ ಮಾಡಲು ಇಲ್ಲಿಗೆ ಬಂದಿದ್ದೆ. ಕಾಂಗ್ರೆಸ್ ಹಾಗೂ ಅವರ ಸ್ನೇಹಿತರು ಹೇಗೆ ನಡೆಸಿಕೊಂಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. 1994ರ ರೀತಿ ಅವರು ಮತ್ತೆ ಪಾತ್ರ ನಿರ್ವಹಿಸಲು ಹಳೆ ಮನೆಗೆ ಬನ್ನಿ ಎಂದು ಮನವಿ ಮಾಡಿದ್ದೇನೆ. ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡುತ್ತಾರೆ. ಇಬ್ರಾಹಿಂ ಅವರನ್ನು ಯಾವ ರೀತಿ ಬಳಕೆ ಮಾಡಿದರು, ಅವರಿಗೆ ಸಿಕ್ಕ ಸ್ಥಾನ ಏನು ಎಂಬುವುದು ಗೊತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಪರೋಕ್ಷವಾಗಿ ಟೀಕಿಸಿದರು. ನಾನಿದ್ದಾಗ ಜೆಡಿಎಸ್ನಲ್ಲಿ 58 ಸ್ಥಾನ ಇತ್ತು. ಆಮೇಲೆ 28 ಸ್ಥಾನಕ್ಕೆ ಬಂತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರೊಬ್ಬರೇ ಅಲ್ಲಾ ಪಿ.ಜಿ.ಆರ್.ಸಿಂಧ್ಯಾ, ಎಂ.ಪಿ.ಪ್ರಕಾಶ್, ಸಿ.ಎಂ.ಬ್ರಾಹಿಂ ಸೇರಿದಂತೆ ಎಲ್ಲರೂ ಪಕ್ಷದಲ್ಲಿ ಇದ್ದರು ಎಂದರು.
ಇದನ್ನೂ ಓದಿ : ಶಾಲಾ ಶಿಕ್ಷಣದಲ್ಲಿ ಹೊಸ ಶಕೆ: ಸಚಿವ ಸುರೇಶ್ ಕುಮಾರ್
ನಾನು ಏಕಾಂಗಿ ಹೋರಾಟ ಮಾಡಿ ಸಿದ್ದರಾಮಯ್ಯನವರಿಗೆ ಸವಾಲು ಹಾಕುತ್ತೇನೆ. ಕಾಂಗ್ರೆಸ್ನಿಂದ ಹೊರ ಬಂದು ಏಕಾಂಗಿಯಾಗಿ ಚುನಾವಣೆ ಎದುರಿಸಿ ನಾಲ್ಕು ಸ್ಥಾನ ಗೆಲ್ಲಲಿ ನೋಡೋಣ. ನಾವು ಅವರ ಗುಲಾಮರಲ್ಲ, ಸಿದ್ದರಾಮಯ್ಯ ಅವರಿಗೆ ಸಂಸ್ಕೃತಿ ಇದೆಯಾ? ಸೌಜನ್ಯ ಇದೆಯಾ? ಸಭಾಪತಿ ಸ್ಥಾನಕ್ಕೆ ಬೆಂಬಲ ಕೇಳದೆ ಬೆಂಬಲ ಕೊಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ದೇವೇಗೌಡರ ಸೆಕ್ಯುಲರ್ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ನಮ್ಮವರನ್ನು ಟ್ರ್ಯಾಪ್ ಮಾಡಿದರು. ರಾಜಕೀಯ ಹೇಳಿಕೆ ಕೊಡುವಾಗ ದುರಹಂಕಾರ ಬಿಡಲಿ ಎಂದು ಕಿಡಿಕಾರಿದರು.
ರಾಜ್ಯ ಪ್ರವಾಸ ಮಾಡಿ ತೀರ್ಮಾನ: ಇದೇ ವೇಳೆ ಸಿ.ಎಂ.ಇಬ್ರಾಹಿಂ ಮಾತನಾಡಿ, ಡಿಸೆಂಬರ್ 15ರ ನಂತರ ನಾನು ರಾಜ್ಯ ಪ್ರವಾಸ ಮಾಡಿ ತೀರ್ಮಾನ ಕೈಗೊಳ್ಳುತ್ತೇನೆ. ನಾನು ಯಾರನ್ನೂ ಬಿಟ್ಟು ಹೋಗಿಲ್ಲ, ಕೆಲವರು ನನ್ನನ್ನು ಬಿಟ್ಟು ಹೋದರು. ಸಿದ್ದರಾಮಯ್ಯ ಅವರ ಬಗ್ಗೆ ನಾನೇನು ಮಾತನಾಡಲ್ಲ. ಅವರ ಟೇಸ್ಟ್ ಬದಲಾಗಿದೆ. ಕೆಲವರಿಗೆ ಟೇಸ್ಟ್ ಬದಲಾದಾಗ ಬೇರೆ ಟೇಸ್ಟ್ ನೋಡುತ್ತಾರೆ ಎಂದರು.