ಬೆಂಗಳೂರು: ಉಪ ಚುನಾವಣೆ ಸಂಬಂಧ ಹದಿನೈದು ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿ ರೆಡಿ ಇದೆ. ಭಾನುವಾರ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಈಗ ಸುಪ್ರೀಂ ಕೋರ್ಟ್ ಉಪಚುನಾವಣೆಗೆ ತಡೆ ನೀಡಿದೆ. ನಾವೆಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆ ನಂತರ ಪ್ರತಿಕ್ರಿಯೆ ನೀಡಿದ ಅವರು, ನಾವೆಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು. ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದರ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡಲ್ಲ. ಆದರೆ, ನಮಗೆ ಒಂದು ಅನುಮಾನ, ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಹೋಗಿ ತಮ್ಮ ಅಭಿಪ್ರಾಯ ತಿಳಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಹೆಚ್. ಡಿ. ರೇವಣ್ಣ ಪ್ರತಿಕ್ರಿಯೆ ಅನರ್ಹರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದೆಂದು ಹೇಳುತ್ತಾರೆ. ಅವರ ಹಿಂದೆ ಯಾರಿದ್ದಾರೊ ನಮಗೆ ಗೊತ್ತಿಲ್ಲ. ರಾಜ್ಯ ಚುನಾವಣಾಧಿಕಾರಿಗಳು ಅವಕಾಶ ಇಲ್ಲ ಎಂದು ಹೇಳುತ್ತಾರೆ ಆದ್ರೆ ಕೇಂದ್ರ ಚುನಾವಣಾ ಆಯುಕ್ತರು ನಿಲ್ಲಬಹುದು ಎಂದು ಹೇಳುತ್ತಾರೆ, ಇವರಿಬ್ಬರಲ್ಲಿ ಯಾರು ದೊಡ್ಡವರು ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಹೇಳಬೇಕು ಎಂದು ಹೇಳಿದರು.
ಜೆಡಿಎಸ್ ಚುನಾವಣೆ ತಯಾರಿ ನಡೆಸಿದೆ, ಕೆ.ಆರ್.ಪೇಟೆ ಮತ್ತು ಹುಣಸೂರಿನಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಹೀಗಾಗಿ ಕೆ. ಆರ್. ಪೇಟೆಯಲ್ಲಿ ಪುಟ್ಟರಾಜು ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತೆ. ಹುಣಸೂರಿನಲ್ಲಿ ಜಿಲ್ಲಾಧ್ಯಕ್ಷರು, ಸಾ. ರಾ. ಮಹೇಶ್ ಅಭ್ಯರ್ಥಿ ಆಯ್ಕೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದರು.
ಫೋನ್ ಟ್ಯಾಪಿಂಗ್ ಪ್ರಕರಣದ ಆರೋಪದಲ್ಲಿ ಸಿಬಿಐ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನಿವಾಸದ ಮೇಲೆ ದಾಳಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ರೇವಣ್ಣ ನಿರಾಕರಿಸಿದರು.