ಬೆಂಗಳೂರು: ಆಪರೇಷನ್ ಕಮಲವೆಂಬ ಕೆಟ್ಟ ಕೊಳಕು ರಾಜಕೀಯಕ್ಕೆ 'ಸಿದ್ದಪುರುಷ'ರು ಇವರೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರ 'ಬಿ ಟೀಮ್' ಹೇಳಿಕೆಗೆ ಕಿಡಿ ಕಾರಿದ್ದಾರೆ.
ಬಿಜೆಪಿ ಬಿ ಟೀಮ್ ಯಾವ ಪಕ್ಷ? ಅದರ ಕ್ಯಾಪ್ಟನ್ ಯಾರು?. ಬಿ ಟೀಮ್ ಭಾಗವತಿಕೆ ಇಲ್ಲಿಗೇ ನಿಲ್ಲಿಸಿದರೆ ಉತ್ತಮ. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆ. ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ದುರ್ಬಲವಾದರೆ ಆ ಪಾಪಕ್ಕೂ ನೀವೇ ಹೊಣೆ. ಬಿ ಟೀಮ್ ಯಾವ ಪಕ್ಷ ಎಂಬ ಬಹಿರಂಗ ಚರ್ಚೆಗೆ ನಾನು ಸಿದ್ದ. ವಿಧಾನಸೌಧದ ಮುಂದೆಯೇ ಚರ್ಚೆ ನಡೆಯಲಿ. ನಿಮ್ಮ ಸಿದ್ದಪುರಷರ ಜತೆ ನೀವೂ ಬನ್ನಿ. ಸಮಯ, ದಿನಾಂಕ ನಾನು ನಿಗದಿ ಮಾಡಲಾ? ಅಥವಾ ನೀವು ಮಾಡುತ್ತೀರಾ? ಉತ್ತರಕ್ಕೆ ಕಾಯುತ್ತಿರುತ್ತೇನೆ ಎಂದು ಸವಾಲು ಹಾಕಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರೇ, ಹೊಸ ಬಾಟಲಿಗೆ ಹಳೆಯ ಮದ್ಯ ತುಂಬುವ ವ್ಯರ್ಥ ಕೆಲಸ ಏಕೆ? ರಾಜ್ಯ ಕಾಂಗ್ರೆಸ್ ಪಕ್ಷದ ಸಿದ್ದಹಸ್ತರ ಪ್ರಭಾವಕ್ಕೆ ಒಳಗಾಗಿ ಸವಕಲು ಸುಳ್ಳುಗಳನ್ನೇ ಹೇಳುವ ಕರ್ಮ ನಿಮಗೇಕೆ ಬಂತು?. ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಹಾಸನದಲ್ಲಿ ದೂರಿದ್ದೀರಿ. ಪಾಪ.. ನಿಮ್ಮನ್ನು ಪ್ರಜ್ಞಾವಂತ ರಾಜಕಾರಣಿ ಎಂದು ಭಾವಿಸಿದ್ದೆ. ನೀವು ನೋಡಿದರೆ 'ಸಿದ್ದಭಾಷಣವನ್ನೇ ನಕಲು ಮಾಡಿ ನಗೆಪಾಟಲಿಗೆ ಒಳಗಾಗಿದ್ದೀರಿ. ಸತ್ಯ ಅರಿತು ಮಾತನಾಡಿದ್ದರೆ ನಾನೂ ಖುಷಿ ಪಡುತ್ತಿದ್ದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಬಾಲಂಗೋಚಿಯನ್ನು ಪಕ್ಕದಲ್ಲೇ ಕೂರಿಸಿಕೊಂಡು ಜೆಡಿಎಸ್ ಅನ್ನು ಬಿಜೆಪಿ ಬಿ ಟೀಮ್ ಎಂದು ದೂರಿದ್ದೀರಿ, ನಿಜಕ್ಕೂ ಆ ಬಿ ಟೀಮ್ ಯಾವುದು? ಆ ಟೀಮ್ ಕ್ಯಾಪ್ಟನ್ ಯಾರು? ಎನ್ನುವುದನ್ನು ನಿಮ್ಮ ಪಕ್ಕದಲ್ಲೇ ಇದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಕೇಳಬಾರದಿತ್ತೇ? ಅರೆಬರೆ ಆಲಾಪದಿಂದ ಅಪಹಾಸ್ಯಕ್ಕೆ ಈಡಾಗಿದ್ದೀರಿ. ಜೆಡಿಎಸ್, ಬಿಜೆಪಿ ಬಿ ಟೀಮ್ ಎಂದು 2018ರಲ್ಲಿ ಹಾಸನದಲ್ಲಿ ರಾಹುಲ್ ಗಾಂಧಿ ಅವರಿಂದ ಹೇಳಿಸಿದ್ದ ನಿಮ್ಮ ಪಕ್ಷದ ಶಾಸಕಾಂಗ ನಾಯಕರು, 2008ರಲ್ಲಿ ಮಾಡಿದ್ದೇನು? ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕೆಳಗಿಸಲು ಬಿಜೆಪಿಯ ಯಡಿಯೂರಪ್ಪ ಅವರ ಜತೆ ನೇರ ಡೀಲ್ ಕುದುರಿಸಿದ್ದವರ ಬಗ್ಗೆ ಗೊತ್ತಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.