ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಬಿಗಿ ಕ್ರಮ ಕೈಗೊಳ್ಳುವುದಾಗಿಯೂ, ಈ ಬಗ್ಗೆ ವಿಪಕ್ಷಗಳೊಂದಿಗೆ ಸಭೆ ನಡೆಸುವುದಾಗಿಯೂ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಕೋವಿಡ್ ಚಿಕಿತ್ಸೆಗೆ ಬೇಕಾಗುವ ಮೂಲಸೌಕರ್ಯ ಹೊಂದಿಸಿಟ್ಟುಕೊಳ್ಳದ, ರೋಗದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳದ, ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿ ಏನು ಉಪಯೋಗ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರ, ರಾಜ್ಯ ಸರ್ಕಾರಗಳಿಗೆ 2ನೇ ಅಲೆ ಕಾಣಿಸಿಕೊಳ್ಳುವ ಎಚ್ಚರಿಕೆಗಳಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಇದೆಲ್ಲದರ ಮಧ್ಯೆ ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ರೆಮ್‌ಡಿಸಿವಿರ್ ಎಂಬ ಚುಚ್ಚುಮದ್ದಿಗೆ ದೇಶದಲ್ಲಿ ಅಭಾವ ಸೃಷ್ಟಿಯಾಗಿದೆ. ಸೋಂಕಿತರಿಗೆ ಚಿಕಿತ್ಸೆಯೇ ಖಾತ್ರಿ ಇಲ್ಲದಂತಾಗಿದೆ.
ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ಇಷ್ಟ ಬಂದಂತೆ ರಫ್ತು ಮಾಡಿದ್ದ ಕೇಂದ್ರ ಸರ್ಕಾರವು ಟೀಕೆಗಳು ಬರುತ್ತಲೇ, ಔಷಧಿಗೆ ಅಭಾವ ಎದುರಾಗುತ್ತಲೇ ರಫ್ತು ನಿಷೇಧಿಸಿದೆ. ಆದರೆ, ಈಗ ಕಾಲ ಮಿಂಚಿದೆ. ಒಂದೆಡೆ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆಯಾಗಿದೆ. ಆದರೆ, ದೇಶದ ಆಸ್ಪತ್ರೆಗಳು ರೆಮ್‌ಡಿಸಿವಿರ್‌ಗಾಗಿ ಕಾದು ಕೂರುವ ಪರಿಸ್ಥಿತಿ ಉದ್ಭವಿಸಿದೆ.