ಬೆಂಗಳೂರು: ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಲು ನಾನು ಬಿಜೆಪಿಯಿಂದ ಹಣ ಪಡೆದಿರುವುದಾಗಿ ಮಿತ್ರರೊಬ್ಬರು ಹೇಳಿದ್ದಾರೆ. ಆಗಲಿ, 2005ರಲ್ಲಿ ಎಸ್ ಎಂ ಕೃಷ್ಣ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅವರ ಖರ್ಚು ವೆಚ್ಚಗಳಿಗೆ ಜೆಡಿಎಸ್ ಬಿಜೆಪಿಯಿಂದ ದುಡ್ಡು ತಂದಿತ್ತೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 2005ರ ಚಾಮರಾಜಪೇಟೆ ಉಪಚುನಾವಣೆಯ ಆ 'ಮುಸ್ಲಿಂ ಅಭ್ಯರ್ಥಿ'ಗಾಗಿ ಮಾಜಿ ಪ್ರಧಾನಿ ದೇವೇಗೌಡರು ಗಲ್ಲಿಗಲ್ಲಿಗಳಲ್ಲಿ ಸುತ್ತಿದ್ದರು. ಬೆವರು ಹರಿಸಿದ್ದರು. ದೇವೇಗೌಡ ಅವರಂತವರು ಅಂದು ಅಷ್ಟು ಕಷ್ಟಪಟ್ಟು ಉಪಚುನಾವಣೆ ನಡೆಸಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಇದಕ್ಕೆ ಸನ್ಮಿತ್ರರು ಆತ್ಮಸಾಕ್ಷಿಯಿಂದ, ಮನದಾಳದಿಂದ, ಪ್ರಾಮಾಣಿಕ ಉತ್ತರ ಕೊಡಬಹುದೇ? ಎಂದು ಪ್ರಶ್ನಿಸಿದ್ದಾರೆ. ಚಾಮರಾಜಪೇಟೆ ಉಪಚುನಾವಣೆಯ ಮತದಾನಕ್ಕೆ ಇನ್ನು 2 ದಿನಗಳು ಬಾಕಿ ಉಳಿದಿವೆ ಎನ್ನುವಾಗ ನಮ್ಮ 'ಮುಸ್ಲಿಂ ಅಭ್ಯರ್ಥಿ' ಏಕಾಏಕಿ ಕಾಣೆಯಾಗಿದ್ದರು. ಕಾರಣ ಹುಡುಕಿದಾಗ ಹಣದ ಕೊರತೆ ಎಂಬ ಅಂಶ ಗೊತ್ತಾಯಿತು. ಅಂದು ಶಿವಮೊಗ್ಗ ಪ್ರವಾಸದಲ್ಲಿದ್ದ ನಾನು ಓಡೋಡಿ ಬಂದು ಸಾಲ ಮಾಡಿ ಹಣ ಹೊಂದಿಸಿಕೊಟ್ಟಿದ್ದೆ. ಅಂದು ನಾನು ತಂದ ಸಾಲ ಬಿಜೆಪಿಯ ಹಣವಾಗಿತ್ತೇ? ಎಂದು ಪ್ರಶ್ನಿಸಿದ್ದಾರೆ.
ಅಂದು ಚಾಮರಾಜಪೇಟೆಯಲ್ಲಿ ಬಿಜೆಪಿ ಗೆಲ್ಲಿಸಲು ಜೆಡಿಎಸ್ 'ಮುಸ್ಲಿಂ ಅಭ್ಯರ್ಥಿ'ಯನ್ನು ಗುರುತಿಸಿತ್ತೇ? ಅಂದು ಬಿಜೆಪಿಯನ್ನು ಗೆಲ್ಲಿಸಲೆಂದು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದಿದ್ದರೆ ಇಂದು ನನ್ನ ವಿರುದ್ಧ ಆರೋಪ ಮಾಡಲು ಆ ನಾಯಕರೇ ಇರುತ್ತಿರಲಿಲ್ಲ. ಜೆಡಿಎಸ್ ಪಕ್ಷದ ತ್ಯಾಗಕ್ಕಾಗಿ ಕಿಂಚಿತ್ತು ಕೃತಜ್ಞತೆ ಉಳಿಯದಿದ್ದರೆ ಹೇಗೆ? ಎಂದು ಜಮೀರ್ ಅಹ್ಮದ್ ಖಾನ್ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ.