ಬೆಂಗಳೂರು :ಕೋಮುಭಾವನೆ ಕೆರಳಿಸುವ ಈ ನಿಲುವು ನಿಮಗೆ ತಿರುಗು ಬಾಣವಾಗಲಿದೆ. ಕರ್ನಾಟಕದಿಂದ ಬಿಜೆಪಿ ಪಕ್ಷ ಸರ್ವನಾಶ ಆಗಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. ಪಕ್ಷದ ಕಚೇರಿ ಜೆಪಿಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮುಂದಾಗಿರುವ ನೀವು ಈ ರೀತಿ ಮಾಡಿದರೆ ಬಿಜೆಪಿ ಮುಕ್ತ ಕರ್ನಾಟಕ ಆಗಲಿದೆ. ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.
ರಾಜ್ಯದಲ್ಲಿ ಭಾವನಾತ್ಮಕ ವಿಷಯವನ್ನು ಕೆರಳಿಸಿ, ರಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವ ಬಿಜೆಪಿ ವಿರುದ್ಧ ಮೃಧು ಧೋರಣೆ ತೋರಿದ್ದು ಕಾಂಗ್ರೆಸ್ಸೋ, ಜೆಡಿಎಸ್ ಪಕ್ಷವೋ?. ಅಧಿವೇಶನದಲ್ಲಿ ಯಾರು ಮಾತನಾಡಿದ್ದು?. ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಆಗಬಾರದು ಅಂತಾ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದು ಜೆಡಿಎಸ್ ಪಕ್ಷ. ಕಾಂಗ್ರೆಸ್‌ನ ತಿಳಿಗೇಡಿತನದಿಂದ ಗೋಹತ್ಯೆ ನಿಷೇಧ ಬಿಲ್ ಸದನದಲ್ಲಿ ಪಾಸ್ ಆಗಿದೆ.
ಮತಾಂತರ ನಿಷೇಧ ಕಾಯ್ದೆಯಲ್ಲಿ ಮುಖಕ್ಕೆ ಮಂಗಳರಾತಿ ಆಗಿದ್ದು ಕಾಂಗ್ರೆಸ್ ಪಕ್ಷಕ್ಕೆ. ಅವರ ಕಾಲದಲ್ಲಿ ಮತಾಂತರ ವಿಧೇಯಕ ಸಂಪುಟ ಸಭೆಗೆ ತರಲು ಸಹಿ ಹಾಕಿದ್ದವರು ಸಿದ್ದರಾಮಯ್ಯ. ಕಾನೂನು ಸಚಿವರ ಸದನದಲ್ಲಿ ಈ ಬಗ್ಗೆ ದಾಖಲೆ ಮುಂದಿಟ್ಟಿದ್ದರು. ಮತಾಂತರ ನಿಷೇಧ ಕಾಯ್ದೆ ಸಂಬಂಧ ವಿಧಾನಸಭೆ ಕಲಾಪದಲ್ಲಿ ಕದ್ದು ಓಡಿದ್ದು ಕಾಂಗ್ರೆಸ್ ಪಕ್ಷದವರು ಎಂದು ಆರೋಪಿಸಿದರು.
ಬೆಂಕಿ ಹಚ್ಚಿರುವುದೇ ಕಾಂಗ್ರೆಸ್ :ಹಿಜಾಬ್ ಸಂಬಂಧ ಕಾಂಗ್ರೆಸ್ ಮೌನವಾಗಿರುವ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ನಮಗೆ ನೀವು ಮೃಧು ಧೋರಣೆ ಅಂತಾ ಹೇಳುತ್ತೀರಾ?. ಬೆಂಕಿ ಹಚ್ಚಿರುವುದೇ ಕಾಂಗ್ರೆಸ್ ಪಕ್ಷದವರು. ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದು ಕಾಂಗ್ರೆಸ್ ಪಕ್ಷದವರಿಂದ. ಧೈರ್ಯವಾಗಿ ಮಾತನಾಡಿ, ಏನೂ ಆಗಲ್ಲ. ನಾನು ಯಾರನ್ನು ಮೆಚ್ಚಿಸಲು ಮಾತನಾಡುತ್ತಿಲ್ಲ. ಸರ್ಕಾರ ಜಾಣ ಕಿವುಡು, ಜಾಣ ಮೌನ ತೋರುತ್ತಿದೆ. ಕೇಸರಿ ಶಾಲು ಹಾಕುವ ಗೂಂಡಾಗಳ ವಿರುದ್ಧ ಸರ್ಕಾರ ಏನೂ ಮಾಡಿಲ್ಲ. ನಿಮ್ಮ ತಾಕತ್ತು ಎಲ್ಲಿ ಹೋಗಿದೆ? ಎಂದು ವಾಗ್ದಾಳಿ ನಡೆಸಿದರು.
ನಾನು ದಾರ್ಶನಿಕ ಎಂದು ಬಿಜೆಪಿಯವರು ಬೋರ್ಡ್ ಹಾಕಿ ಓಡಾಡುತ್ತಿದ್ದಾರೆ. ನಾನು ಬೋರ್ಡ್ ಹಾಕಿ ಓಡಾಡುತ್ತಿಲ್ಲ. ಸ್ವಾರ್ಥಕ್ಕಾಗಿ ಮತಬ್ಯಾಂಕ್‌ಗಾಗಿ ನಾನು ಮಾತನಾಡುತ್ತಿಲ್ಲ. ನಾವು ಧೈರ್ಯವಾಗಿ ಮಾತನಾಡುತ್ತೇವೆ. ಕನಕದಾಸರನ್ನು ಏನು ಮಾಡಿಸಿದಿರಿ?. ಬಿಜೆಪಿಯವರು ಶ್ರೀಮಂತರಿಗೆ ಒಂದು ಟ್ರೀಟ್ಮೆಂಟ್, ಬಡವರಿಗೆ ಒಂದು ಟ್ರೀಟ್ಮೆಂಟ್, ಗತಿ ಇಲ್ಲದವನಿಗೆ ಒಂದು ಟ್ರೀಟ್ಮೆಂಟ್ ಕೊಡ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಕಾಶ್ಮೀರಿ ಫೈಲ್ಸ್‌ಗಲ್ಲ, ಮಂತ್ರಿಗಳ ಕಚೇರಿಯಲ್ಲಿರುವ ಫೈಲ್ಸ್‌ಗೆ ವಿನಾಯಿತಿ ನೀಡಿ :ಕಾಶ್ಮೀರಿ ಫೈಲ್ಸ್ 100% ತೆರಿಗೆ ವಿನಾಯಿತಿ ನೀಡುವುದಕ್ಕಿಂತ, ನಿಮ್ಮ ಮಂತ್ರಿಗಳ ಕಚೇರಿಯಲ್ಲಿರುವ ಫೈಲ್ಸ್‌ಗಳಿಗೆ 100% ವಿನಾಯಿತಿ ನೀಡಿ. ಇದರಿಂದ ಜನರಿಗೆ ಉಪಯೋಗ ಆಗುತ್ತದೆ. ಸಿಎಂಗೆ ಈ ಬಗ್ಗೆ ವಿನಂತಿ ಮಾಡುತ್ತೇನೆ ಎಂದರು. ನಾನು ಧೈರ್ಯವಾಗಿ ಮಾತನಾಡುತ್ತೇನೆ. ಕಾಂಗ್ರೆಸ್ ತರ ಅಂಜುವವನಲ್ಲ. ನಾನು ರಾಜ್ಯದ 6.50 ಕೋಟಿ ಜನರ ಪರವಾಗಿ ಮಾತನಾಡುವವನು.
ವಿಹೆಚ್ಪಿ, ಬಜರಂಗ ದಳದವರೇ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ದೇಶಕ್ಕೆ ಅನ್ನ ಕೊಡುವವರು ನೀವಲ್ಲ. ದೇಶವನ್ನು ಉದ್ಧಾರ ಮಾಡುವವರು ನೀವಲ್ಲ. ಬಿಸಿಲಿನಲ್ಲಿ ಬೆಂದು ಬೆಳೆ ಬೆಳೆಯುವ ರೈತ ದೇಶಕ್ಕೆ ಅನ್ನ ಕೊಡ್ತಾನೆ. ನೀವಲ್ಲ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಗತಿ ನಮ್ಮ ರಾಜ್ಯಕ್ಕೂ ಬರಲಿದೆ. ಆ ರೀತಿ ಸಾಲ ಮಾಡಲಾಗುತ್ತಿದೆ. ಬಂಡವಾಳ ವೆಚ್ಚಕ್ಕೆ ಹಣ ಇಲ್ಲ. ಸಾಲದ ಮೇಲೆ ಸಾಲ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.