ಬೆಂಗಳೂರು:ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕೆಂಬ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಬೇಡಿಕೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸದೇ ಮೌನಕ್ಕೆ ಶರಣಾಗಿದೆ.' ನ ಖಾವುಂಗಾ, ನಾ ಖಾನೆ ದುಂಗಾ' ಎಂದಿದ್ದ ಪ್ರಧಾನಿ ಉದ್ದಿಮೆದಾರರ ಹಿತ ರಕ್ಷಣೆಗೆ ಮಾತ್ರ ಮುಂದಾಗಿರುವುದು ಸರಿಯೇ? ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಂಕಷ್ಟದಲ್ಲಿರುವವರಿಗಾಗಿ ಕೇಂದ್ರ ಸರ್ಕಾರ ಮರುಗಿದೆ! ಅವರ ಆರ್ಥಿಕ ಪುನಶ್ಚೇತನಕ್ಕಾಗಿ ಧಾರಾಳ ನೆರವು ನೀಡಿದೆ! ಈ ಕಷ್ಟಕಾಲದಲ್ಲೂ ಮಲ್ಯ, ಮೆಹುಲ್ ಚೋಕ್ಸಿ, ಸಂಜಯ್ ಜುಂಜುನ್‌ವಾಲ, ಬಾಬಾ ರಾಮದೇವ ಅಂತಹ ಉದ್ದೇಶಪೂರ್ವಕ ಸುಸ್ತಿದಾರರ 68 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಮ್ಯುಚುವಲ್ ಫಂಡ್ ಉದ್ದಿಮೆದಾರರಿಗೆ 50 ಸಾವಿರ ಕೋಟಿ ನೆರವು ನೀಡಲಾಗಿದೆ ಎಂದು ದೂರಿದ್ದಾರೆ.
ಲಾಕ್ಡೌನ್ನಿಂದಾಗಿ ರೈತರು ಕೈಗೆ ಬಂದ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದಾರೆ. ಲಕ್ಷಾಂತರ ಜನರ ಉದ್ಯೋಗ ನಷ್ಟವಾಗಿದೆ, ಸಂಬಳವಿಲ್ಲದೆ ಅದೆಷ್ಟೋ ಕುಟುಂಬಗಳು ಪರಿತಪಿಸುತ್ತಿವೆ. ಕೆಲವರು ಆಹಾರವಿಲ್ಲದೇ, ಇನ್ನು ಕೆಲವರು ದೂರದೂರುಗಳಿಗೆ ನಡೆದು ಕೊನೆಯುಸಿರೆಳೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರಕ್ಕೆ ನೆನಪಾಗಬೇಕಿದ್ದು, ನಿತ್ಯ ದುಡಿಮೆಯ ಶ್ರಮಿಕ ವರ್ಗ. ರೈತರು, ಅಸಂಘಟಿತ ಕಾರ್ಮಿಕರು ಮತ್ತು ಬಡವರು. ಆದರೆ, ಕೇಂದ್ರ ಸರ್ಕಾರಕ್ಕೆ ಕಂಡವರು ಅತಿ ಶ್ರೀಮಂತರು ಎಂದು ಟೀಕಿಸಿದ್ದಾರೆ.
ದೇಶದಲ್ಲಿ ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆದಾಗ ಅವರ ಸಾಲ ಮನ್ನಾ ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ರಾಜ್ಯಗಳೂ ಸಾಲ ಮನ್ನಾಕ್ಕೆ ಒತ್ತಾಯಿಸಿದ್ದವು. ಆದರೆ, ಆಗ ರೈತರತ್ತ ತಿರುಗಿಯೂ ನೋಡದ ಕೇಂದ್ರ ಈಗ ಮಲ್ಯ, ಚೋಕ್ಸಿ ಅಂತಹವರ ಸಾಲ ಮನ್ನಾ ಮಾಡಿದೆ. ರೈತನಿಗಿಂತ ದೇಶಕ್ಕೆ ದ್ರೋಹ ಬಗೆದವರೇ ಕೇಂದ್ರಕ್ಕೆ ಮುಖ್ಯವಾದರೇ? ಇದೇನಾ ದೇಶ ಪ್ರೇಮ? ಎಂದು ಪ್ರಶ್ನಿಸಿದ್ದಾರೆ.
ಆರ್ಥಿಕ ಚಟುವಟಿಕೆಗಳಿಲ್ಲದೇ, ಆದಾಯವಿಲ್ಲದೇ ಸೊರಗುತ್ತಿರುವ ಈ ವೇಳೆ ರಾಜ್ಯಗಳು ಅನುದಾನ ಕೇಳುತ್ತಿರುವ ಹೊತ್ತಿನಲ್ಲಿ ಮ್ಯುಚುವಲ್ ಫಂಡ್ ಉದ್ದಿಮೆಗಳ ನೆರವಿಗೆ ಓಡೋಡಿ ಹೋಗುವಂತಹ ತುರ್ತು ಈಗೇನಿತ್ತು? ಸರ್ಕಾರ ಮೊದಲು ಒಕ್ಕೂಟ, ಅದರೊಳಗಿನ ನಾಗರಿಕರ ಹಿತ ಕಾಪಾಡಬೇಕಲ್ಲವೇ? ಎಂದು ಹೇಳಿದ್ದಾರೆ.
ಇಡೀ ದೇಶವೇ ಆರ್ಥಿಕ ಸಂಕಷ್ಟದಲ್ಲಿರುವಾಗ ದೇಶದ ಹಿತ ನೋಡದೇ, ಮ್ಯುಚುವಲ್ ಫಂಡ್‌ಗಳ ಹಿತ ಕಾಪಾಡಲು ಆರ್‌ಬಿಐ ಮೂಲಕ 50 ಸಾವಿರ ಕೋಟಿಗಳನ್ನು ಬಿಡುಗಡೆ ಮಾಡಿಸುತ್ತಿರುವ ಸರ್ಕಾರದ ನಡೆ ಹಿಂದೆ ಯಾರ ಹಿತ ಅಡಗಿದೆ? ಸಾಮಾನ್ಯ ಜನರದ್ದೋ ಅಥವಾ ಉದ್ದೇಶಪೂರ್ವಕ ಸುಸ್ತಿದಾರ ಉದ್ಯಮಿಗಳದ್ದೋ? ಎಂದಿದ್ದಾರೆ.