ಬೆಂಗಳೂರು: ಈಗಿನ ಬಿಜೆಪಿಯಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಯನ್ನು ಗಮನಿಸಿದರೆ, ಯಾರೇ ಸಿಎಂ ಆದರೂ ಒಂದು ರೀತಿಯ ಮಕ್ಕಳ ಆಟ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮುಖಂಡರ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಖಾತೆ ಹಂಚಿಕೆ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆ ಗಮನಿಸಿದಾಗ, ಬಿಜೆಪಿ ಶಿಸ್ತು ಬದ್ದ ಪಾರ್ಟಿ ಅಂತಾ ಹೇಳುತ್ತಾರೆ. ಅಂತಹ ಪಕ್ಷದಲ್ಲಿ ಇಂತಹ ಬೆಳವಣಿಗೆ ಅಪಹಾಸ್ಯಕ್ಕೆ ಒಳಗಾಗುತ್ತಿದೆ ಎಂದರು.
ಇಂದು ಒಂದು ಮಾಧ್ಯಮದಲ್ಲಿ ಗಮನಿಸಿದೆ. ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಯವರು ಇಂದು ಒಂದು ಮಾತು ಹೇಳಿದ್ದಾರೆ. ಕುಮಾರಣ್ಣ ಇದ್ದಾಗ ನಮಗೆ ಗೌರವ ಸಿಗುತಿತ್ತು. ಕೆಲಸಗಳು ಆಗುತ್ತಿದ್ದವು ಅಂತ ಹೇಳುತ್ತಿದ್ದಾರೆ. ನಮ್ಮ ಸರ್ಕಾರ (ಬಿಜೆಪಿ) ಇದ್ದರೂ ಕೆಲಸಗಳು ಆಗುತ್ತಿಲ್ಲವೆಂದು ಹೇಳುತ್ತಿದ್ದಾರೆ. ಆಂತರಿಕವಾಗಿ ಹಲವಾರು ಶಾಸಕರಿಗೂ ಅದೇ ಭಾವನೆ ಇದೆ. ನನ್ನ ಕಾಲದಲ್ಲಿ ಪ್ರತಿಯೊಬ್ಬರಿಗೂ ಗೌರವ ನೀಡುತ್ತಿದ್ದೆ ಎಂದು ಹೇಳಿದರು.
ಸರ್ಕಾರ ಉಳಿಯಬೇಕಾದರೆ ಜೆಡಿಎಸ್ ಇದೆ ಎಂಬ ಗುಮ್ಮವನ್ನು ಮುಂದೆ ಬಿಟ್ಟುಕೊಂಡು ಹೋಗುತ್ತಿದ್ದಾರೆ. ನೀವೇನಾದ್ರೂ ದ್ರೋಹ ಮಾಡಿದರೆ ಜೆಡಿಎಸ್ ರಕ್ಷಣೆಗೆ ಇದೆ ಅಂತಿದ್ದಾರೆ. ಜೆಡಿಎಸ್ ಮುಗಿದೇ ಹೋಯ್ತು ಅಂತ ಹೇಳುತ್ತಿರುವವರು ಜೆಡಿಎಸ್ ನೆರಳನ್ನು ಪಕ್ಷದ ಹೆಸರನ್ನು ಹೇಳಿಕೊಂಡೇ ರಾಜಕಾರಣ ಮಾಡುವ ಅನಿವಾರ್ಯತೆ ರಾಜ್ಯದಲ್ಲಿ ಸೃಷ್ಟಿಯಾಗಿದೆ ಎಂದು ಹೇಳಿದರು.
ದೇವೇಗೌಡರ ವಿಚಾರ ಹೇಳಿದ್ದೇ ಬೇರೆ. ಜನತೆಯ ಹಿತದೃಷ್ಟಿಯಿಂದ ನಮ್ಮ ಪಕ್ಷ ಇದೆ. ಪ್ರಾದೇಶಿಕ ನೆಲಗಟ್ಟನ್ನು ಇಟ್ಟುಕೊಂಡಿರುವುದು ನಮ್ಮ ಪಕ್ಷ. 25 ವರ್ಷಗಳ ಹಿಂದಿನ ಒಂದು ಘಟನೆಯ ಬಗ್ಗೆ ಬರೆದಿರುವುದನ್ನು ಪತ್ರಿಕೆಗಳಲ್ಲಿ ನೋಡಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ, ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲ ನೀಡಿದ್ದನ್ನು ವಾಪಸ್ ಪಡೆಯುತ್ತೇವೆಂದು ಬೆದರಿಕೆ ಹಾಕಿದ್ದನ್ನು ಮೆಲುಕು ಹಾಕಲಾಗಿದೆ.
ಕಾರಣ ದೇವೇಗೌಡರು ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ 200 ಕೋಟಿ ರೂ. ಹಣ ಕೊಡಬೇಕು ಎಂಬ ನಿರ್ಧಾರ ತೆಗದುಕೊಂಡಿದ್ದರು. ಹಾಗಾಗಿ, ನಿಮ್ಮನ್ನು ಪ್ರಧಾನಮಂತ್ರಿಯಿಂದ ತೆಗೆಯುತ್ತೇವೆ ಎಂದು ಚಂದ್ರಬಾಬು ನಾಯ್ಡು ಬೆದರಿಕೆ ಹಾಕಿದ್ದು ಪ್ರಕಟವಾಗಿದೆ ಎಂದು ವಿವರಿಸಿದರು.
ದೇವೇಗೌಡರು ಕೊಟ್ಟ ಕೊಡುಗೆ: ದೇವೇಗೌಡರಿಗೂ, ಜನತಾದಳಕ್ಕೂ, ಕಾಂಗ್ರೆಸ್ಗೂ ಯಾವ ರೀತಿ ವ್ಯತ್ಯಾಸ ಇದೆ. ಜೆಡಿಎಸ್ ಕೊಡುಗೆ ಏನು ಅನ್ನುವುದನ್ನು ಉತ್ತರ ಕರ್ನಾಟಕ ಜನ ಅರ್ಧ ಮಾಡಿಕೊಳ್ಳಬೇಕು. ಬೆಂಗಳೂರು ಜನ ಕಾವೇರಿ ನೀರು ಕುಡೀತಾ ಇದ್ದರೆ, ಅದು ದೇವೇಗೌಡರು ಕೊಟ್ಟ ಕೊಡುಗೆ. ರಾಷ್ಟ್ರೀಯ ಪಕ್ಷ ಕೊಟ್ಟ ಕೊಡುಗೆ ಅಲ್ಲ. ಆದರೆ ಉತ್ತರ ಕರ್ನಾಟಕ ಹಾಗೂ ಬೆಂಗಳೂರು ನಾಗರೀಕರು ಅಷ್ಟೆ. ಕಾಂಗ್ರೆಸ್, ಬಿಜೆಪಿಗೆ ಮತ ಹಾಕ್ತೀರಾ, ಜೆಡಿಎಸ್ ಮರೆಯುತ್ತೀರಾ ಎಂದರು.