ಬೆಂಗಳೂರು:ಪಾದಯಾತ್ರೆ ಮಾಡುವುದರಿಂದ ಮೇಕೆದಾಟು ಯೋಜನೆ ಪೂರ್ಣಗೊಳ್ಳುವುದಾದರೆ ನಾನು ಸಹ ಬೆಂಬಲ ನೀಡುತ್ತೇನೆ. ಜೊತೆಗೆ ನಮ್ಮ ಕಾರ್ಯಕರ್ತರಿಗೂ ಪಾದಯಾತ್ರೆಗೆ ಹೋಗಲು ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಖಾಸುಮ್ಮನೆ ರಾಜ್ಯದ ಜನರಿಗೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ. ಕೇವಲ ವೋಟ್ ಬ್ಯಾಂಕ್ಗಾಗಿ ಈ ಪಾದಯಾತ್ರೆ ಗಿಮಿಕ್ ಅಷ್ಟೇ ಎಂದರು.
ಕಾಂಗ್ರೆಸ್ ಪಕ್ಷದವರ ಪಾದಯಾತ್ರೆಯಿಂದ ನಮಗೆ ಯಾವುದೇ ಆತಂಕವಿಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಪಾದಯಾತ್ರೆ ಮಾಡಿದ್ದರು ಏನಾಯಿತು?, ನೀರಾವರಿ ವಿಚಾರದಲ್ಲಿ ರಾಜಕೀಯ ಶುರು ಮಾಡಿದ್ದಾರೆ. ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿ ಶೋ ಮಾಡುತ್ತಿದ್ದಾರೆ. ಇವರು ಪಾದಯಾತ್ರೆ ಮಾಡಿದರೆ ತಮಿಳುನಾಡಿನವರೂ ಆರಂಭಿಸುತ್ತಾರೆ ಎಂದರು.
'ಡಿಕೆಶಿ ವಿರುದ್ಧ ಯಾವುದೇ ಷಡ್ಯಂತ್ರ ಮಾಡಿಲ್ಲ'
ನಾನು ಯಾವುದೇ ಷಡ್ಯಂತ್ರ ಮಾಡುವ ನೀಚ ಕೆಲಸ ಮಾಡುವವನಲ್ಲ. ನನ್ನ ಮೇಲೆಯೂ 150 ಕೋಟಿ ರೂ. ಹಗರಣ ಕೇಳಿಬಂತು. ನಾನು ಸಿಎಂ ಆದ ಎರಡು ತಿಂಗಳಿಗೆ ಆರೋಪ ಕೇಳಿಬಂತು. ಆರೋಪ ಕೇಳಿಬಂದ ಬಳಿಕ 16 ತಿಂಗಳು ಅಧಿಕಾರದಲ್ಲಿದ್ದೆ. ಆರೋಪಿಸಿದವರ ವಿರುದ್ಧ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ನಾನು ಯಡಿಯೂರಪ್ಪ ವಿರುದ್ಧ ಹೋರಾಟ ಮಾಡಿದ್ದು ನಿಜ. ದಾಖಲೆಗಳನ್ನು ಮುಂದಿಟ್ಟು ನಾನು ಹೋರಾಟ ಮಾಡಿದ್ದೇನೆ. ಆದರೆ, ಅವರಂತೆ ಬಿಟ್ ಕಾಯಿನ್ ಎಂದು ಆರೋಪ ಮಾಡುವುದಿಲ್ಲ. ಏನಾಯಿತು ಬಿಟ್ ಕಾಯಿನ್? ಎಂದು ಪ್ರಶ್ನಿಸಿದರು.
'ದೇವೇಗೌಡರ ಇತಿಹಾಸ ಗೊತ್ತಿಲ್ಲ'
ಬಾಂಗ್ಲಾದೇಶದ ನೀರಿನ ಸಮಸ್ಯೆಯನ್ನು ಬಗೆಹರಿಸಿದವರು ಯಾರು?. ಕಾಂಗ್ರೆಸ್ ಪಕ್ಷದವರಿಗೆ ದೇವೇಗೌಡರ ಇತಿಹಾಸ ಗೊತ್ತಿಲ್ಲ. ರಾಜ್ಯದ ನೀರಾವರಿ ವಿಚಾರದಲ್ಲಿ ದೇವೇಗೌಡರನ್ನು ನಿರ್ಲಕ್ಷಿಸಬೇಡಿ. ಅವರನ್ನು ನಿರ್ಲಕ್ಷ್ಯ ಮಾಡಿದರೆ ರಾಜ್ಯಕ್ಕೇ ನಷ್ಟ. ದೇವೇಗೌಡರು ಇನ್ನೆಷ್ಟು ದಿನಗಳು ಇರುತ್ತಾರೋ ಗೊತ್ತಿಲ್ಲ. ಈ ನಾಡಿಗಾಗಿ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಡಿಕೆಶಿ ಭೇಟಿಯಾದ ಆರ್ಚಕರ ನಿಯೋಗ.. ದೇವಾಲಯಗಳ ಖಾಸಗೀಕರಣಗೊಳಿಸದಂತೆ ಸರ್ಕಾರಕ್ಕೆ ಒತ್ತಡ ಹೇರಲು ಮನವಿ..