ಕರ್ನಾಟಕ

karnataka

ETV Bharat / state

ಜೆಡಿಎಸ್‌ನ 'ಜನತಾ ಜಲಧಾರೆ' ಕಾರ್ಯಕ್ರಮ ಮುಂದೂಡಿಕೆ: ಹೆಚ್.ಡಿ.ಕುಮಾರಸ್ವಾಮಿ

ನಮ್ಮ ಕಾರ್ಯಕ್ರಮದಲ್ಲಿ ಮುಚ್ಚುಮರೆ ಏನೂ ಇಲ್ಲ. ನಮಗೆ ಐದು ವರ್ಷ ಪೂರ್ಣ ಪ್ರಮಾಣದ ಅವಕಾಶ ನೀಡಿದರೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕೈಗೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

h-d-kumaraswamy
ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಮಾತನಾಡಿದರು

By

Published : Jan 18, 2022, 8:28 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣಕ್ಕೆ ಈ ತಿಂಗಳ 26 ರಿಂದ ಆರಂಭವಾಗಬೇಕಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಭಾಗದಲ್ಲೂ ಸೋಂಕು ಏರುತ್ತಲೇ ಇದೆ. ಸರ್ಕಾರ ಅದರ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ, ಜನರ ಹಿತದೃಷ್ಟಿಯಿಂದ ನಾವು ಜನತಾ ಜಲಧಾರೆಯ ಗಂಗಾ ರಥಯಾತ್ರೆಯನ್ನು ಮುಂದೂಡಿದ್ದೇವೆ. ಸೋಂಕು ಇಳಿಮುಖವಾದ ಕೂಡಲೇ ಆರಂಭ ಮಾಡುತ್ತೇವೆ ಎಂದು ಹೇಳಿದರು.


ಪೂರ್ವನಿಗದಿಯಂತೆ ಈ ತಿಂಗಳ 26ರಂದು ಜನತಾ ಜಲಧಾರೆ ಕಾರ್ಯಕ್ರಮ ಆರಂಭ ಆಗಬೇಕಿತ್ತು. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಪಕ್ಷ ಮಾಡಿಕೊಂಡಿತ್ತು. ಆದರೆ, ಕಾಂಗ್ರೆಸ್ ಪಕ್ಷದವರಂತೆ ನಮಗೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ಮಾಡುವ ಧಾವಂತ ಇಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡೇ ಗಂಗಾ ರಥಯಾತ್ರೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜಲಧಾರೆ ಆರಂಭಕ್ಕೆ ಮುನ್ನ ನಾವು ಜನರಿಗೆ ಈ ಬಗ್ಗೆ ಪೂರ್ಣ ಮಾಹಿತಿ ನೀಡುತ್ತೇವೆ. ಪ್ರತಿ ಮನೆಮನೆಗೂ ಕರಪತ್ರ ಸೇರಿದಂತೆ ಬೇರೆ ಬೇರೆ ರೂಪದಲ್ಲಿ ಜಲಧಾರೆ ಮಾಹಿತಿ ಕೊಡಲಾಗುವುದು. ರಾಜ್ಯದ ನೀರಾವರಿಗೆ ಪಕ್ಷ ನೀಡಿರುವ ಕೊಡುಗೆಗಳನ್ನು ತಿಳಿಸಲಾಗುವುದು. ಮುಖ್ಯವಾಗಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ ದೇವೇಗೌಡರು ನೀಡಿರುವ ಕೊಡುಗೆಗಳ ಬಗ್ಗೆ ವಿವಿಧ ರೂಪದಲ್ಲಿ ಜನರಿಗೆ ಮನದಟ್ಟಾಗುವಂತೆ ಹೇಳಲಾಗುವುದು ಎಂದು ಅವರು ಹೇಳಿದರು.

ನಮ್ಮ ಕಾರ್ಯಕ್ರಮದಲ್ಲಿ ಮುಚ್ಚುಮರೆ ಏನೂ ಇಲ್ಲ. ನಮಗೆ ಐದು ವರ್ಷ ಪೂರ್ಣ ಪ್ರಮಾಣದ ಸರ್ಕಾರ ನಡೆಸಲು ಅವಕಾಶ ನೀಡಿದರೆ ರಾಜ್ಯದಲ್ಲೇ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕೈಗೊಳ್ಳುತ್ತೇವೆ. ಅವುಗಳನ್ನು ಹೇಗೆ ಮಾಡಿ ತೋರಿಸುತ್ತೇವೆ ಎಂಬುದನ್ನು ಜಲಧಾರೆ ಕಾರ್ಯಕ್ರಮದ ಮೂಲಕ ಪ್ರಾಮಾಣಿಕವಾಗಿ ರಾಜ್ಯದ ಮುಂದಿಡುತ್ತೇವೆ.

'ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ'

ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ರಾಜ್ಯದ ನೀರಾವರಿ ಹಿತ ಕಡೆಗಣಿಸುತ್ತಿದೆ. ಅದಕ್ಕೆ ಮತಗಳ ಮೇಲೆ ಮೋಹ ಜಾಸ್ತಿ. ಚುನಾವಣೆ ಹತ್ತಿರ ಬಂದಾಗ ಆ ಪಕ್ಷಕ್ಕೆ ಮೇಕೆದಾಟು ನೆನಪಾಗಿದೆ ಎಂದು ಟೀಕಿಸಿದರು.

ನಮ್ಮ ನೀರು ನಮ್ಮ ಹಕ್ಕು ಎಂಬ ಕಾರ್ಯಕ್ರಮವನ್ನು ಕಾಂಗ್ರೆಸ್ ಈಗ ಮಾಡಲು ಹೊರಟಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಬಳಿಕ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಮಹಾದಾಯಿ ನೀರಿಗಾಗಿ ಹೋರಾಟ ಮಾಡುತಿದ್ದ ರೈತರ ಮೇಲೆ ಪೊಲೀಸ್​ ದೌರ್ಜನ್ಯ ನಡೆಸಿತ್ತು ಕಾಂಗ್ರೆಸ್. ಯಮನೂರು ಎಂಬ ಗ್ರಾಮದಲ್ಲಿ ಹಳ್ಳಿಗಳಿಗೆ ನುಗ್ಗಿ ಹೆಣ್ಣುಮಕ್ಕಳ ಮೇಲೆ ಮೈ ಮೇಲೆ ಬಾಸುಂಡೆ ಬರುವಂತೆ ದೌರ್ಜನ್ಯ ಮಾಡಿಸಿತ್ತು. ಅವತ್ತು ನಮ್ಮ ನೀರು ನಮ್ಮ ಹಕ್ಕು ಅಂತಾ ಹೋರಾಟ ಮಾಡುತ್ತಿದ್ದವರು ರೈತರು ಮಾತ್ರ. ಆದರೆ, ಮನೆಹಾಳು ಮಾಡಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದರು.

ಅಭ್ಯರ್ಥಿಗಳ ಪಟ್ಟಿ ಕೂಡ ರೆಡಿ:

ಈ ಮೊದಲೇ ಹೇಳಿದಂತೆ ಜೆಡಿಎಸ್ ಪಕ್ಷದ ಮುಂದಿನ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಕೊರೊನಾ ಸೋಂಕು ಕಾರಣಕ್ಕೆ ಅದನ್ನು ಪ್ರಕಟ ಮಾಡುವುದು ವಿಳಂಬವಾಗಿದೆ. ಸೋಂಕು ನಿಯಂತ್ರಣಕ್ಕೆ ಬಂದ ಕೂಡಲೇ ನಮ್ಮ ಪಟ್ಟಿಯೂ ಹೊರಬರುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಉಪಸ್ಥಿತರಿದ್ದರು.

ಇದನ್ನೂ ಓದಿ:ತಮ್ಮನ ವಿದ್ಯಾಭ್ಯಾಸ, ಅಪ್ಪ-ಅಮ್ಮನ ಆರೈಕೆ: ಓದುವ ವಯಸ್ಸಲ್ಲಿ ಬಾಲಕಿ ಕುಟುಂಬ ನಿರ್ವಹಣೆ, ಬಾಡಿತು ಬಾಲ್ಯ..

ABOUT THE AUTHOR

...view details