ಬೆಂಗಳೂರು:ಸಿದ್ದರಾಮೋತ್ಸವದಿಂದ ಕಾಂಗ್ರೆಸ್ನಲ್ಲಿ ಭಿನ್ನಮತ ಉಂಟಾಗುತ್ತದೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ವೀಕ್ನೆಸ್ ಮೇಲೆ ನಾವು ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ.
ಕಾಂಗ್ರೆಸ್ ವಿರುದ್ಧ ಹೆಚ್ಡಿಕೆ ವಾಗ್ದಾಳಿ:ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆ ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮೋತ್ಸವಕ್ಕೆ ಬರುವಾಗ ಅವರ ಕ್ಷೇತ್ರದ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಆ ಕಾರ್ಯಕ್ರಮದಲ್ಲಿ ಒಂದು ಶ್ರದ್ಧಾಂಜಲಿ ಕೂಡ ಸಲ್ಲಿಕೆ ಮಾಡಿಲ್ಲ. ಇದು ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ರೀತಿ. ಕಾರ್ಯಕರ್ತ ಸತ್ತರೂ ಸಹ ಯಾರು ಕೇಳಲಿಲ್ಲ. ಕಾರ್ಯಕರ್ತನಿಗೆ ಬೆಲೆ ಕೊಡದೇ ಸಿದ್ದರಾಮಯ್ಯ ಅವರು ವೀರಾವೇಶದಲ್ಲಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮೋತ್ಸವದ ಬಗ್ಗೆ ನನಗೆ ಆಸಕ್ತಿ ಇಲ್ಲ. ಜೆಡಿಎಸ್ನಿಂದ ಜನತಾ ಜಲಧಾರೆ ಮಾಡಿದ್ದೇವೆ. ಅದರ ಶೇ. 50 ರಷ್ಟು ಈ ಸಮಾವೇಶ ಇಲ್ಲ. ನಮ್ಮ ಕಾರ್ಯಕ್ರಮದ ಮುಂದೆ ಸಿದ್ದರಾಮೋತ್ಸವ ಕಾರ್ಯಕ್ರಮ ಏನು ಅಲ್ಲ. 7 ಲಕ್ಷ, 8 ಲಕ್ಷ, 20 ಲಕ್ಷ ಅಂತಾರೆ. ಅವರ ಲೆಕ್ಕಕ್ಕೆ ಅರ್ಥವೇ ಇಲ್ಲ. ನಮಗೂ ಎಲ್ಲಾ ಮಾಹಿತಿ ಇದೆ. ಅಡುಗೆ ಮಾಡಿರುವುದು, ಶಾಮಿಯಾನ ಹಾಕಿರುವುದು ಎಲ್ಲದರ ಮಾಹಿತಿ ನನಗೆ ಇದೆ. ಎಷ್ಟೇ ಆರ್ಭಟ ಮಾಡಿದರೂ ನಮ್ಮ ಕಾರ್ಯಕ್ರಮಕ್ಕೆ ಅವರ ಕಾರ್ಯಕ್ರಮ ಸರಿಸಾಟಿ ಆಗುವುದಿಲ್ಲ ಎಂದು ಹೆಚ್ಡಿಕೆ ಟೀಕಿಸಿದರು.