ಕರ್ನಾಟಕ

karnataka

ETV Bharat / state

ಸದ್ದಿಲ್ಲದಂತೆ ಸಾಂತ್ವನ ಕೇಂದ್ರಗಳಿಗೆ ಸಿಎಂ ಬೀಗ ಜಡಿಸಿದ್ದಾರೆ: ಹೆಚ್​ಡಿಕೆ

ಎಲ್ಲಾ ಜಿಲ್ಲಾ ಮತ್ತು ಕೆಲವು ತಾಲೂಕು ಮಟ್ಟದ 71 ಕೇಂದ್ರಗಳ ಸಾಂತ್ವನ‌ ಕೇಂದ್ರಗಳಿಗೆ ಸಿಎಂ ಯಡಿಯೂರಪ್ಪ ಬೀಗ ಜಡಿಸಿ ಮಾತು ತಪ್ಪಿದ್ದಾರೆ. ಇದರಿಂದ ಕೋವಿಡ್-19 ಸಂಕಷ್ಟದಲ್ಲಿ ಸ್ತ್ರೀಯರಿಗೆ ಮತ್ತೊಂದು ಬರೆ ಎಳೆದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

h d kumaraswamy
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

By

Published : May 1, 2021, 9:20 AM IST

ಬೆಂಗಳೂರು: ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳಿಗೆ ಸರ್ಕಾರ ಬೀಗ ಜಡಿಯಲ್ಲ ಎಂದಿದ್ದ ಮುಖ್ಯಮಂತ್ರಿಗಳು ಸದ್ದಿಲ್ಲದಂತೆ ಎಲ್ಲಾ ಜಿಲ್ಲಾ ಮತ್ತು ಕೆಲವು ತಾಲೂಕು ಮಟ್ಟದ 71 ಕೇಂದ್ರಗಳ ಸಾಂತ್ವನ‌ ಕೇಂದ್ರಗಳಿಗೆ ಬೀಗ ಜಡಿಸಿ ಮಾತು ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್-19 ಸಂಕಷ್ಟದಲ್ಲಿ ಸ್ತ್ರೀಯರಿಗೆ ಮತ್ತೊಂದು ಬರೆ ಎಳೆದಂತಾಗಿದೆ. ಕೌಟುಂಬಿಕ ಹಿಂಸಾಚಾರ ನಿಯಂತ್ರಿಸಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವ ವಿಶ್ವಸಂಸ್ಥೆಯ ಆಶಯ ಬದಿಗೊತ್ತಿರುವುದು ಖಂಡನೀಯ ಎಂದಿದ್ದಾರೆ.

ಕಳೆದ ಎರಡು ದಶಕಗಳಿಂದ ಸಾಂತ್ವನ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲಾ, ತಾಲೂಕು ಮಟ್ಟದಲ್ಲಿನ ಸಾಂತ್ವನ ಕೇಂದ್ರಗಳು ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ, ಆತ್ಮವಿಶ್ವಾಸ ಮೂಡಿಸುತ್ತಿವೆ. ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಆರಂಭಗೊಂಡಿದ್ದ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಿ ಅದೇಶ ಹೊರಡಿಸಿದ್ದು, ದೂರು ದುಮ್ಮಾನ ಪರಿಹರಿಸುವವರು ಯಾರು ಎಂಬ ಪ್ರಶ್ನೆ‌ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೋವಿಡ್​ ಆರ್ಭಟ: ಹುಬ್ಬಳ್ಳಿ ರೈಲ್ವೆ ಮತ್ತು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು

ಸರ್ಕಾರದ ಸಖಿ ಒನ್ ಸ್ಟಾಪ್​​​​ ಸೆಂಟರ್ ಯೋಜನೆ ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಸಲಹೆ ನೀಡುವ ಉದ್ದೇಶವನ್ನು ಹೊಂದಿದ್ದರೂ ಕರ್ನಾಟಕದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯ ಮಾಡುತ್ತಿಲ್ಲ. ಜಿಲ್ಲೆಗೆ ಕೇವಲ ಒಂದೇ ಒಂದು ಕೇಂದ್ರ ಇರುವ ಕಾರಣ ಎಲ್ಲರಿಗೂ ಸುಲಭವಾಗಿ ನೆರವು ಸಿಗಲು ಸಾಧ್ಯವಾಗುತ್ತಿಲ್ಲ. ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಕಷ್ಟವನ್ನು ದೇವರೇ ಕಾಪಾಡಬೇಕಿದೆ. ಈ ಸಮಯದಲ್ಲಿ ಸಾಂತ್ವನ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದು ಸೂಕ್ತವಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ಕೂಡಲೇ ಅದೇಶ ಹಿಂಪಡೆದು ಸಾಂತ್ವನ ಕೇಂದ್ರಗಳನ್ನು ಮುಂದುವರೆಸಿ. ಶೋಷಿತ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳು ಆಸರೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಕಾರ್ಮಿಕರಿಗೆ ಶುಭಾಶಯ ಕೋರಿದ ಹೆಚ್​ಡಿಕೆ : ಉಣ್ಣುವ ಕೈಗಳಿಗೆ, ಮನೆಗಳ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯುವ ಕೈಗಳೇ ಆಧಾರ. ಅಂತಹ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕ ವರ್ಗಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರು ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಶುಭಾಶಯ ಕೋರಿದ್ದಾರೆ.

ಕಾರ್ಮಿಕರಿದ್ದರೆ ಮಾಲೀಕರಾಗೋದು, ಮಾಲೀಕ, ಕಾರ್ಮಿಕ ಇಬ್ಬರೂ ಪರಸ್ಪರ ಪೂರಕವಾಗಿರಬೇಕು. ಹಾಗಾಗಿ ಕಾರ್ಮಿಕರ ಶೋಷಣೆ ಕೊನೆಗೊಳ್ಳಲಿ. ಕೊರೊನಾ ಕಗ್ಗತ್ತಲು ಕಳೆದು ಕಾರ್ಮಿಕರ ಬಾಳಲ್ಲಿ ಹೊಸಬೆಳಕು ಮೂಡಲಿ. ಎಲ್ಲರ ಬದುಕು ಹಸನಾಗಲಿ ಎಂದು ಶುಭ ಹಾರೈಸಿದ್ದಾರೆ.

ABOUT THE AUTHOR

...view details