ಬೆಂಗಳೂರು : ಇವತ್ತಿನ ದಿನ ನನ್ನ ಕ್ಷೇತ್ರ ಚನ್ನಪಟ್ಟಣದಲ್ಲಿ ಸರ್ಕಾರದ ಅನುದಾನ ಕಾರ್ಯಕ್ರಮದ ಶಂಕುಸ್ಥಾಪನೆ ಇತ್ತು. ಆದರೆ, ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಜಕೀಯಕ್ಕೊಸ್ಕರ ಇವತ್ತು ಕಾರ್ಯಕ್ರಮ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಿ ಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆ ಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಸರ್ಕಾರದ ಅನುದಾನ ಕಾರ್ಯಕ್ರಮ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸದನದಲ್ಲೇ ಹೇಳಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಆಯೋಜಿಸುವ ಸರ್ಕಾರ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲಿಸಬೇಕು ತಪ್ಪಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ ಎಂದರು.
ಇತ್ತೀಚೆಗೆ ಕೆಐಎಡಿಬಿ ಸಭೆಯಲ್ಲೂ ಉಸ್ತುವಾರಿ ಸಚಿವರಾಗಿ ನಾನೇ ಎಲ್ಲ ಉದ್ಘಾಟನೆಗೆ ಬರುತ್ತೇನೆ ಎಂದು ರಾಮನಗರ ಉಸ್ತುವಾರಿ ಸಚಿವರು ಹೇಳಿದ್ದಾರೆ. ಮೊನ್ನೆ ಹೊರಡಿಸಿದ ಆಹ್ವಾನದಲ್ಲಿ ಮುದ್ರಣ ಆಗಿರುವುದು ನಾನು ಯಾವತ್ತೂ ನೋಡಿಲ್ಲ. ವಿಧಾನಪರಿಷತ್ ಸದಸ್ಯರ ಕೋರಿಕೆ ಮೇರೆಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆಂದು ಸಿ.ಪಿ. ಯೋಗೇಶ್ವರ್ ಹೆಸರು ಹಾಕಿದ್ದಾರೆ.
ಒಬ್ಬ ಮಾಜಿ ಸಿಎಂ ಕ್ಷೇತ್ರದಲ್ಲೇ ಈ ರೀತಿ ದಬ್ಬಾಳಿಕೆ ಅಂದರೆ ನೀವೇ ಯೋಚನೆ ಮಾಡಿ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತಾಡಿದ್ದೇನೆ ಅವರು ನನ್ನ ಗಮನಕ್ಕೆ ಬಂದಿಲ್ಲ ಅಂತಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಿಲ್ಲ. ನಾನು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಕೆಡುವುದರಲ್ಲಿ ಸಿ.ಪಿ.ಯೋಗೇಶ್ವರ್ ಪಾತ್ರ ಏನು?. ಯಾವ ಪಾಪದ ಹಣ ಅನ್ನುವುದನ್ನು ನಾನು ಈಗ ಮಾತನಾಡುವುದಿಲ್ಲ. ಮುಂದಿನ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಹಣ ಮಾಡಲು ಯೋಗೇಶ್ವರ್ ಹೀಗೆಲ್ಲಾ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ನೀರಾವರಿ ಯೋಜನೆ ನೀಡುವಂತೆ ಸಿ.ಪಿ. ಯೋಗೇಶ್ವರ್ ಕೇಳಿದ್ದರು. ಆಗ 1,700 ಕೋಟಿ ರೂ. ಹಣ ಕೊಟ್ಟಿದ್ದೇನೆ ಎಂದರು.
ನನ್ನ ಶಕ್ತಿ ಕುಂದಿಸಲು ಸಾಧ್ಯವಿಲ್ಲ : ಪೊಲೀಸ್ ಬೆಟಾಲಿಯನ್ ಮೂಲಕ ಶಂಕುಸ್ಥಾಪನೆ ಮಾಡಿದ್ದಾರೆ. ಇದರಿಂದ ನನ್ನ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ. ರಾಮನಗರ ಜನತೆಯೊಂದಿಗೆ ನನ್ನ ಒಡನಾಟ ಯಾವ ರೀತಿ ಇದೆ ಅಂತ ಎಲ್ಲರಿಗೂ ಗೊತ್ತು. ವೀಕ್ನೆಸ್ ಅಂದುಕೊಂಡರೆ ಮುಂದಿನ ದಿನಗಳಲ್ಲಿ ನೋಡಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಬಿಎಂಎಸ್ ಟ್ರಸ್ಟ್ ಹಗರಣ ತನಿಖೆಯಾದರೆ ಯಾರ ತಲೆ ಉರುಳುತ್ತದೆ ಎಂಬುದು ಗೊತ್ತಿಲ್ಲ. ತನಿಖೆಯಾದರೆ ಒಬ್ಬೊಬ್ಬರ ಇತಿಹಾಸವೂ ಹೊರಬರುತ್ತದೆ ಎಂದು ಗುಡುಗಿದ ಹೆಚ್ ಡಿ ಕೆ, ಚನ್ನಪಟ್ಟಣದಲ್ಲಿ ಈ ರೀತಿಯ ದೌರ್ಜನ್ಯಕ್ಕೆ ನಾನು ಹೆದರುವುದಿಲ್ಲ. ಶಂಕುಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಹೋಗಿಲ್ಲ. ವಿಧಾನಪರಿಷತ್ನ ನಾಲ್ಕು ಚೇಲಾಗಳನ್ನು ಇಟ್ಟುಕೊಂಡು ಶಂಕುಸ್ಥಾಪನೆ ಮಾಡುತ್ತೀರಾ? ನಿಯಮ ಉಲ್ಲಂಘನೆ ಮಾಡಿರುವ ಅವರನ್ನು ಬಂಧಿಸಬೇಕು. ಅದು ಬಿಟ್ಟು ಧರಣಿ ಮಾಡುವವರನ್ನು ಬಂಧಿಸುತ್ತೀರಾ ಎಂದು ಕಿಡಿಕಾರಿದರು.