ಬೆಂಗಳೂರು: ಬೇರೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ಬಿಂಬಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 2018ರಲ್ಲಿ ಅಧಿಕಾರಕ್ಕೆ ಬರುವವರೆಗೆ ಈ ಯೋಜನೆ ಧೂಳು ಕುಡಿಯುತ್ತಿತ್ತು. 14 ತಿಂಗಳು ಸಿಎಂ ಆಗಿದ್ದಾಗ ರೈಲ್ವೆ ಸಚಿವ ಪಿಯೂಷ್ ಗೋಯಲ್ರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಈ ಮೂಲಕ 23,000 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಅಂದು ಅಡಿಪಾಯ ಹಾಕಲು ಬಿಡಲಿಲ್ಲ ಎಂದು ಹೇಳಿದರು.
ಆಗಲೇ ಕಾಲಮಿತಿಯಲ್ಲಿ ಉಪನಗರ ರೈಲು ಯೋಜನೆ ಮುಗಿಸಲು ಸಂಪುಟದ ಒಪ್ಪಿಗೆ ತೆಗೆದುಕೊಂಡಿದ್ದೆ. ಅದಕ್ಕೆ ಕೇಂದ್ರ ಸರಕಾರ 19 ಷರತ್ತುಗಳನ್ನು ವಿಧಿಸಿತ್ತು. ಆ ಷರತ್ತುಗಳನ್ನು ನನ್ನ ಸರಕಾರ ಪೂರೈಸಿತ್ತು. ಆದರೆ, ಈಗ ಚುನಾವಣೆ ಬರುತ್ತಿದೆ ಎನ್ನುವ ಕಾರಣಕ್ಕೆ ಬಂದು ಯೋಜನೆಗೆ ಚಾಲನೆ ಕೊಟ್ಟಿದ್ದು ಕೇವಲ ಚುನಾವಣೆ ಗಿಮಿಕ್ ಅಷ್ಟೇ ಎಂದರು.