ಬೆಂಗಳೂರು: ಜನೋತ್ಸವ ಕಾರ್ಯಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು, ಸಾವಿನ ಮನೆಯಲ್ಲಿ ಸಂಭ್ರಮ ಯಾಕೆ?. ಸಂಭ್ರಮಾಚರಣೆ ಮಾಡಲು ಶಾಂತಿ ನೆಲೆಸಿರಬೇಕಲ್ಲವೇ? ಎಂದು ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಕ್ತ ವಾತಾವರಣ ಇಲ್ಲದೇ ಹೋದರೆ ಯಾವ ಗ್ಯಾರಂಟಿ ಮೇಲೆ ಮನೆಯಿಂದ ಆಚೆ ಬರುತ್ತಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಎಷ್ಟು ಸಾವು ಆಗಿವೆ. ನಾನಿದ್ದಾಗ ಈ ರೀತಿ ಆಗಿರಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನಾಯ್ತು. ಇದೆಲ್ಲಾ ಲೆಕ್ಕಾಚಾರ ಮಾಡಬೇಕಿದೆ ಎಂದರು.
ಬಿಜೆಪಿ ಸರ್ಕಾರಕ್ಕೆ ನಾನು ಹೇಳುವುದು ಇಷ್ಟೆ, ನಿಮ್ಮ ಇಲಾಖೆ ಭದ್ರಗೊಳಿಸಿ. ಒಂದು ಕೆಲಸಕ್ಕೆ ರೇಟ್ ಫಿಕ್ಸ್ ಮಾಡಿದರೆ ಹಣ ಕೊಟ್ಟ ಅಧಿಕಾರಿ ನ್ಯಾಯಯುತವಾಗಿ ಕೆಲಸ ಮಾಡುತ್ತಾನಾ?. ಕಂದಾಯ, ಪೊಲೀಸ್ ಇಲಾಖೆಯಲ್ಲಿ ಈ ರೀತಿ ಇದನ್ನು ನಿಲ್ಲಿಸಿ, ಜನರ ಜೊತೆ ಚೆಲ್ಲಾಟ ಆಡುತ್ತಿದ್ದೇವೆ. ಒಂದು ಕೋಟಿ ಕೊಟ್ಟ ವ್ಯಕ್ತಿ ವಸೂಲಿ ಮಾಡಬೇಕಾ?. ಸಂಭ್ರಮಾಚರಣೆ ಜನರ ರಕ್ಷಣೆಯಲ್ಲಿರಬೇಕು. ಪ್ರಚಾರ ಕೊಟ್ಟು ಸಂಭ್ರಮಿಸುವುದಲ್ಲ ಎಂದು ಟೀಕಿಸಿದರು.
ರಾಜ್ಯದ ಪುತ್ತೂರು ತಾಲೂಕಿನಲ್ಲಿ ಯುವಕನ ಹತ್ಯೆಯಾಗಿದೆ. ಇದು ಅತ್ಯಂತ ಖಂಡನೀಯ ಘಟನೆ. ಸರ್ಕಾರಕ್ಕೆ ಹೇಳುವುದು ಹಾಗೂ ಎಲ್ಲಾ ಪಕ್ಷಗಳಿಗೂ ಹೇಳುವುದು ಯಾವುದೇ ಸಮಾಜದ ಸಂಘಟನೆ ಇರಲಿ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಿ. ಆ ತಾಯಿ ನನ್ನ ಮಗನ ಜೀವ ಕೊಡಿ ಅಂತಿದ್ದಾರೆ. ನಾವು ಆ ಕುಟುಂಬದ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಆತ್ಮಾವಲೋಕನ ಮಾಡಿಕೊಳ್ಳಬೇಕು: ರಾಜಕಾರಣಿಗಳು ಸಾವಿನ ನಂತರ ಸಾಂತ್ವನ, ಪರಿಹಾರ ಕೊಡುವುದರಿಂದ ಹೋದ ಜೀವ ಮತ್ತೆ ವಾಪಸ್ ತರಲು ಆಗಲ್ಲ. ಬಿಜೆಪಿ ಸರ್ಕಾರ ಇದ್ದಾಗ ಈ ಘಟನೆ ಕಾಣುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಹೀಗೆ ಆಗಿತ್ತು. ರಾಜಕಾರಣಿಗಳು, ಶ್ರೀಮಂತರ ಸಾವು ಆಗಲ್ಲ. ಆದರೆ, ಅಮಾಯಕರು ಬಲಿ ಆಗುತ್ತಾರೆ. ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ಆದಾಗ ಸರ್ಕಾರವೇ ಆ ಕುಟುಂಬದ ಮನೆಗೆ ಹೋಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದಾದ ನಂತರ ಸರಣಿ ಸಾವು ಆಗುತ್ತಿವೆ. ಹತ್ಯೆಗಳನ್ನು ನಿಲ್ಲಿಸಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಲ್ಲಿ ಲಾಠಿ ಚಾರ್ಜ್ ಆಗುತ್ತಿದೆ. ಹತ್ಯೆಯಾದ ಯುವಕ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಮಾಡಿಕೊಂಡಿದ್ದ. ಈ ನಾಡಿನ ಒಬ್ಬ ಯುವಕ, ತಂದೆ -ತಾಯಿ ಸಾಕುವ ಒಬ್ಬ ಜವಾಬ್ದಾರಿ ಯುವಕ. ಇದನ್ನೆಲ್ಲಾ ಸರ್ಕಾರ, ರಾಜಕೀಯ ಪಕ್ಷಗಳು ಗಮನಿಸಬೇಕು. ಕೃತಕ ಸಂತಾಪ ಸೂಚಿಸುವ ಅವಶ್ಯಕತೆ ಇಲ್ಲ. ಶಾಂತಿ ತೋಟ ರಕ್ಷಣೆ ಮಾಡಬೇಕು ಅನ್ನುವುದು ನನ್ನ ಅನಿಸಿಕೆ ಎಂದರು.