ಬೆಂಗಳೂರು:ಇವತ್ತು ರಾಜಕಾರಣದಲ್ಲಿ ನೈತಿಕತೆ ಉಳಿದುಕೊಂಡಿಲ್ಲ. ಸಿದ್ಧಾಂತಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದರು.
ಯಶವಂತಪುರ ಕ್ಷೇತ್ರದ ಪ್ರಚಾರದ ವೇಳೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‌ಸಿಪಿ ಸರ್ಕಾರ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇವರೇ ಕಾಪಾಡಬೇಕು. ಇಷ್ಟು ದಿನ ಎನ್‌ಸಿಪಿ, ಶಿವಸೇನೆ ಸರ್ಕಾರ ರಚನೆ ಮಾಡುತ್ತಾರೆ ಅಂತಿದ್ದರು. ಆದರೆ, ಇವತ್ತು ಬಿಜೆಪಿ ಎನ್‌ಸಿಪಿ ಸರ್ಕಾರ ರಚನೆ ಮಾಡಿದೆ. ಶರದ್ ಪವಾರ್ ಬಿಜೆಪಿಯ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದವರು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜಕಾರಣದಲ್ಲಿ ನೈತಿಕತೆ, ಸಿದ್ಧಾಂತಗಳಿಗೆ ಬೆಲೆ ಇಲ್ಲ: ಹೆಚ್ಡಿಕೆ ಬಿಹಾರದಲ್ಲಿ ನಿತೀಶ್ ಕುಮಾರ್ ಲಾಲೂ ಪ್ರಸಾದ್ ಯಾದವ್ ಜೊತೆ ಸೇರಿಕೊಂಡಿದರು. ಆ ನಂತರ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರು. ಬಿಜೆಪಿಯವರು ಎನ್ಸಿಪಿಯ ಭ್ರಷ್ಟಾಚಾರ ಬಯಲು ಮಾಡುತ್ತೇನೆ ಅಂತಾ ಹೇಳುತ್ತಾ ಇದ್ದರು. ಆದರೆ, ಇವತ್ತು ಎನ್‌ಸಿಪಿ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ನಮಗೆ ಸಿದ್ಧಾಂತ ಇಲ್ಲ ಅಂತ ಬಿಜೆಪಿಯವರು ಟೀಕೆ ಮಾಡುತ್ತಾರೆ. ಬಿಜೆಪಿಯವರು ಮಹಾರಾಷ್ಟ್ರದಲ್ಲಿ ಮಾಡಿದ್ದಾದ್ರೂ ಏನು? ಎಂದು ಪ್ರಶ್ನಿಸಿದರು.
ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ಮೊದಲು ತೆಗೆಯಲಿ. ಬಳಿಕ ನಮ್ಮ ಬಗ್ಗೆ ಬಿಜೆಪಿಯವರು ಮಾತನಾಡಲಿ. ಮಹಾರಾಷ್ಟ್ರದಲ್ಲಿ ಅಗತ್ಯ ಸ್ಥಾನಗಳನ್ನು ಬಿಜೆಪಿ, ಎನ್‌ಸಿಪಿ ಹೊಂದಿವೆ. ಎಷ್ಟು ದಿನ ಸರ್ಕಾರ ಇರುತ್ತದೆ ಅನ್ನೋದನ್ನು ನೋಡೋಣ ಎಂದು ವಾಗ್ದಾಳಿ ನಡೆಸಿದರು.
ಸೋಮಶೇಖರ್ಗೆ ಬುದ್ಧಿ ಭ್ರಮಣೆಯಾಗಿದೆ:
ಇದೇ ವೇಳೆ, ಬಿಡಿಎ ಕತಡತಗಳಿಗೆ ನಟಿ ಸಹಿಹಾಕಿಸಿಕೊಳ್ಳುತ್ತಿದ್ದರು ಎಂಬ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಆರೋಪಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸೋಮಶೇಖರ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆ ರೀತಿಯ ಅವಕಾಶ ನಾನು ಕಲ್ಪಿಸಿಕೊಟ್ಟಿಲ್ಲ. ಬಿಡಿಎ ಉಸ್ತುವಾರಿ ವಹಿಸಿಕೊಂಡಿದ್ದು ನಾನಲ್ಲ. ಪರಮೇಶ್ವರ್ ಅವರ ಬಳಿಯೇ ಬಿಡಿಎ, ಬೆಂಗಳೂರು ಉಸ್ತುವಾರಿ ಇತ್ತು. ಸೋಮಶೇಖರ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಸೋಮಶೇಖರ್ ಅವರಿಗೆ ಬುದ್ಧಿ ಭ್ರಮಣೆ ಆಗಿದೆ ಎಂದು ಕಿಡಿಕಾರಿದರು.
ಈ ರೀತಿಯ ಹುಡುಗಾಟಿಕೆಯ ಹೇಳಿಕೆ ನೀಡುವುದನ್ನ ಮೊದಲು ಬಿಡಲಿ. ಈ ಕುರಿತಂತೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ಒಂದೇ ವೇದಿಕೆಯಲ್ಲಿ ಚರ್ಚೆಗೆ ನಾನು ಸಿದ್ಧನಿದ್ದೇನೆ. ಕಾನೂನು ಬಾಹಿರವಾಗಿ ಒಂದೇ ಒಂದು ಫೈಲ್ ಗೆ ಸಹಿ ಹಾಕಿಸಿದ್ದು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.