ಬೆಂಗಳೂರು: ಸುಳ್ಳು ಸ್ಲೋಗನ್ಗಳ ಸೃಷ್ಟಿಕರ್ತ, ಟರ್ಮಿನೇಟರ್, ಸಿದ್ಧಕಲೆಯ ನಿಪುಣಾಗ್ರೇಸರು ಈಗ ಜೆಡಿಎಫ್ ಎಂಬ ಹೊಸ ಜಪ ಮಾಡಿಕೊಂಡು ತಮ್ಮ ಜಾತ್ಯತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳುನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ಜಾತಿ ಸಹಕಾರಕ್ಕೆ ಮೊರೆ ಹೋಗಿದ್ದಾರೆ. ಅಯ್ಯೋ, ಎಂಥಾ ದುರ್ವಿಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹೆಚ್ಡಿಕೆ, ಮತ ಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ. ಸಮುದಾಯದ ಅಧ್ಯಕ್ಷರೊಬ್ಬರು, ನೀವು ಮತ ಹಾಕುವುದು ಕಾಂಗ್ರೆಸ್ ಪಕ್ಷಕ್ಕಲ್ಲ, ನಮ್ಮ ಸಮುದಾಯದ ವ್ಯಕ್ತಿಗೆ ಎಂದು ಮನೆಮನೆಗೂ ಹೋಗಿ ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ ಮಜಬೂತಾಗಿ ನಡೆಯುತ್ತಿದೆ. ಹೇಳುವುದು ಒಂದು, ಮಾಡುವುದು ಇನ್ನೊಂದು. ಅವರಿಗೆ ಜೆಡಿಎಸ್ ಫೋಬಿಯಾ ಕಾಡುತ್ತಿದೆ. ಚುನಾವಣೆ ಬಂದರೆ ಜೆಡಿಎಸ್ ಚಳಿ-ಜ್ವರ ಹತ್ತುತ್ತದೆ. ಈ ಜ್ವರ ಬಿಡಿಸಿಕೊಳ್ಳಲು ಸಿದ್ದಸೂತ್ರದಾರ ಬಳಸುವ ಹೊಸ ಔಷಧವೇ JDF. ಅವರನ್ನು ಉಳಿಸುವ ಟಾನಿಕ್ನ ಹೆಸರೇ ಜೆಡಿಎಸ್ ಕುಟುಂಬ ರಾಜಕಾರಣ ಎಂದಿದ್ದಾರೆ.