ಬೆಂಗಳೂರು:ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸಿದ್ದರಾಮಯ್ಯ ವಿರುದ್ಧ ಗುಡುಗಿದ ಮಾಜಿ ಸಿಎಂ ಕುಮಾರಸ್ವಾಮಿ, ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಬೇಕು ಎಂದು ವಾರ್ನಿಂಗ್ ನೀಡಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನು ಅವರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಸಿದ್ದರಾಮಯ್ಯ ಇದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗುವಾಗ ನನ್ನ ಕೊಡುಗೆ ಅಪಾರವಾಗಿದೆ. ನನ್ನ ಬಗ್ಗೆ ಮಾತನಾಡುವಾಗ ಸಿದ್ದರಾಮಯ್ಯ ಎಚ್ಚರಿಕೆಯಿಂದಿರಬೇಕು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ವಿರುದ್ಧ ಗುಡುಗಿದ ಹೆಚ್.ಡಿ.ಕುಮಾರಸ್ವಾಮಿ 2004ರಲ್ಲಿ ನಿಮ್ಮನ್ನು ಅಧಿಕಾರಕ್ಕೆ ತರಲು ನನ್ನ ದುಡಿಮೆ ಇದೆ. ನನ್ನನ್ನು ಸಿಎಂ ಮಾಡುವಲ್ಲಿ ನಿಮ್ಮ ದುಡಿಮೆ ಇಲ್ಲ. 2004ರಲ್ಲಿ ನನ್ನ ಆರ್ಥಿಕ ಶಕ್ತಿಯನ್ನು ಬಳಸಿ ನಿಮ್ಮನ್ನು ಡಿಸಿಎಂ ಮಾಡಿದ್ದೇನೆ. ನಾನು ಸಿದ್ದರಾಮಯ್ಯ ಋಣದಲ್ಲಿ ಇಲ್ಲ. ಸಿದ್ದರಾಮಯ್ಯ ನನ್ನ ಋಣದಲ್ಲಿದ್ದಾರೆ ಎಂದರು.
ತಾಜ್ ವೆಸ್ಟ್ ಎಂಡ್ನಲ್ಲಿ ಇದ್ದು ಆಡಳಿತ ಮಾಡಿದೆ ಎಂದು ಸಿದ್ದರಾಮಯ್ಯ ಲಘುವಾಗಿ ಮಾತನಾಡುವುದು ಬೇಡ. ನಾನು ಬಿಜೆಪಿಯ ಬಿ ಟೀಮ್ ಆಗಿದ್ದರೆ, ಕಾಂಗ್ರೆಸ್ ಜೊತೆ ಸರ್ಕಾರ ಮಾಡುತ್ತಿರಲಿಲ್ಲ. ಕಾಂಗ್ರೆಸ್ನವರೇ ಸರ್ಕಾರ ಮಾಡಲಿ ಎಂದು ಸಿದ್ದರಾಮಯ್ಯನವರ ಎದುರು ದೇವೇಗೌಡರು ಹೇಳಿದ್ದರು. ಆ ವೇಳೆ ಗುಲಾಂ ನಬಿ ಆಜಾದ್, ಡಿಕೆಶಿ ಎಲ್ಲರೂ ಇದ್ದರು ಎಂದು ಟಾಂಗ್ ನೀಡಿದ್ದಾರೆ.
ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಇಲ್ಲ:
ಜೆಡಿಎಸ್ ಪಕ್ಷವನ್ನು ಯಾವುದೇ ರೀತಿಯಲ್ಲೂ ವಿಲೀನ ಮಾಡುವ ಪ್ರಶ್ನೆ ಇಲ್ಲ. ನಾವು ಬದುಕಿರುವವರೆಗೂ ಯಾವುದೇ ಪಕ್ಷದ ಜೊತೆ ವಿಲೀನ ಇಲ್ಲ. ಅಧಿಕಾರದ ಆಸೆಯಿಂದ ಯಾರ ಮನೆ ಬಾಗಿಲಿಗೆ ಹೋಗಿಲ್ಲ. ಕಾಂಗ್ರೆಸ್ನ ಇತ್ತೀಚಿನ ಬೆಳವಣಿಗೆ ಕಂಡು ಅನಿವಾರ್ಯವಾಗಿ ಕೆಲವು ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಊಹಪೋಹಗಳನ್ನ ಗಮನಿಸಿದ್ದೇನೆ. ಜೆಡಿಎಸ್ಅನ್ನು ಯಾವ ಪಕ್ಷದ ಜೊತೆಗೂ ವಿಲೀನ ಮಾಡುವುದು ನಾವು ಬದುಕಿರುವವರೆಗೆ ಆಗಲ್ಲ. ಕಾಂಗ್ರೆಸ್ ನಿರಂತರವಾಗಿ ಜೆಡಿಎಸ್ನ ಕತ್ತು ಹಿಸುಕುವ ಪ್ರಯತ್ನಕ್ಕೆ ಮುಂದಾಗಿದೆ. ಆ ಕಾರಣಕ್ಕೆ ಅನಿವಾರ್ಯವಾಗಿ ಕೆಲವು ನಿರ್ಧಾರ ಮಾಡಿದ್ದೇವೆ. ಕಾಂಗ್ರೆಸ್ನ ಕೆಲವು ನಾಯಕರು ಜೆಡಿಎಸ್ನಿಂದ ಹೋದವರೇ ಜೆಡಿಎಸ್ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಡಿಎಂಕೆ, ನಿತೀಶ್ ಕುಮಾರ್ ಮೊದಲಾದವರು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡರ ಜೊತೆಗೂ ಹೋಗಿದ್ದಾರೆ. ಈ ದೇಶದಲ್ಲಿ ಯಾವ ಪಕ್ಷಕ್ಕೂ ಯಾವ ಸಿದ್ಧಾಂತ ಇಲ್ಲ. ಪ್ರತಿ ಪಕ್ಷವು ಅಧಿಕಾರ ಹೇಗೆ ಹಿಡಿಯಬೇಕು ಎಂಬುದನ್ನು ನೋಡುತ್ತವೆ ಅಷ್ಟೇ ಎಂದರು.
ಓದಿ: ನಾನು ಸಿದ್ದರಾಮಯ್ಯನವರು ಸಾಕಿದ ಗಿಣಿ ಅಲ್ಲ, ಅವರಿಂದ ನಾನು ಸಿಎಂ ಆಗಿರಲಿಲ್ಲ.. ಹೆಚ್ ಡಿ ಕುಮಾರಸ್ವಾಮಿ
ಪಕ್ಷದಿಂದ ಕಾಲು ಹೊರಗಿಟ್ಟವರು ಕೆಲವು ಹೇಳಿಕೆ ಕೊಡ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡ. ನನ್ನ ನಿಜವಾದ ರಾಜಕಾರಣ ಶುರುವಾಗುವುದು 2023ಕ್ಕೆ. ಇದುವರೆಗಿನ ರಾಜಕಾರಣ ತಾತ್ಕಾಲಿಕವಾಗಿ ಮಾಡಿದ್ದು. 2023ಕ್ಕೆ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು ನನ್ನ ಗುರಿ. ಯಾವ ಪಕ್ಷದ ಜೊತೆಗೆ ವಿಲೀನದ ಪ್ರಸ್ತಾಪವು ಇಲ್ಲ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು.