ಬೆಂಗಳೂರು: ಹಿರಿಯ ಮುತ್ಸದ್ಧಿ, ದಿವಂಗತ ಜಿ. ಮಾದೇಗೌಡರ ವಿರುದ್ಧ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರಿಗೆ ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕುವಂತೆ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂತಹವರು ಪಕ್ಷದಲ್ಲಿ ಇದ್ದರೆ ಶೋಭೆ ತೋರುವುದಿಲ್ಲ ಎಂದು ಗರಂ ಆಗಿದ್ದಾರೆ.
ಮಾಧ್ಯಮಗಳಲ್ಲಿ ನಿನ್ನೆ ವಿಡಿಯೋವೊಂದನ್ನು ನೋಡಿದ್ದೇನೆ, ಶಿವರಾಮೇಗೌಡರ ದೂರವಾಣಿ ರೆಕಾರ್ಡ್ ವೈರಲ್ ಆಗಿದೆ. ಸಂಬಂಧ ಇಲ್ಲದೇ ಇರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ದಿ.ಮಾದೇಗೌಡರ ಬಗ್ಗೆ ಮಾತನಾಡಿದ್ದಾರೆ. ನಮಗೆ, ಅವರಿಗೆ ರಾಜಕೀಯ ಬೇರೆ, ಮಾದೇಗೌಡರು ಈಗ ಇಲ್ಲ. ಆದರೆ, ಅವರ ಹೆಸರು ಯಾಕೆ ಎಳೆದು ತಂದಿದ್ದಾರೋ ಗೊತ್ತಿಲ್ಲ. ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂಬಂಧ ನಮ್ಮ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ. ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕಲು ಸೂಚಿಸುತ್ತೇನೆ ಎಂದು ಹೇಳಿದರು.
ಇವರೊಬ್ಬರೇನಾ ಹಣ ಕಂಡಿರುವುದು. ಲೋಕಸಭಾ ಚುನಾವಣೆಯಲ್ಲಿ ಸುಮಾರು 30 ಕೋಟಿ ರೂ. ಖರ್ಚು ಮಾಡಿರುವುದನ್ನು ಹೇಳಿದ್ದಾರೆ. ಅದ್ಯಾರಿಗೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ ಎಂದ ಅವರು, ಮಾದೇಗೌಡರ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಅವರು ಈಗ ನಮ್ಮ ಮುಂದೆ ಇಲ್ಲ. ಇಲ್ಲದ ಸಮಯದಲ್ಲಿ ಶಿವರಾಮೇಗೌಡರು ಈ ರೀತಿ ಪದಬಳಕೆ ಮಾಡಿರೋದು ಸರಿಯಲ್ಲ. ಒಂದು ಇತಿ ಮಿತಿ ಇದೆ. ಇಲ್ಲಿಯವರೆಗ ತಿದ್ದಿಕೊಳ್ಳುತ್ತಾರೆ ಅಂದುಕೊಂಡು ಸುಮ್ಮನಿದ್ದೆವು. ಆದರೆ ಅದು ಆಗಲಿಲ್ಲ ಎಂದು ಬೇಸರ ಹೊರಹಾಕಿದರು.