ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ವಂತ ತೀರ್ಮಾನ ಕೈಗೊಳ್ಳಲು ಅತಂತ್ರ ಸ್ಥಿತಿಯಿತ್ತು. ಕಾಂಗ್ರೆಸ್‌ನ ಒಂದು ಗುಂಪಿನಿಂದ ಸರಿಯಾದ ಸಹಕಾರ ಸಿಗುತ್ತಿರಲಿಲ್ಲ. ಕೆಲ ನಾಯಕರ ಒತ್ತಡಕ್ಕೆ ಮಣಿದು ಕೆಲಸ ಮಾಡುವ ಪರಿಸ್ಥಿತಿ ಇತ್ತು. ಈ ಬಗ್ಗೆ ಕಾಂಗ್ರೆಸ್ ಜೊತೆ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಪಕ್ಷದ ಕಾರ್ಯಕರ್ತರ ಜೊತೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಪಕ್ಷದ ಕಾರ್ಯಕರ್ತರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಿಗಮ-ಮಂಡಳಿಗಳ ನೇಮಕ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಅನುಮತಿ ಬೇಕಿತ್ತು. ಕಾಂಗ್ರೆಸ್‌ನವರು ತಮಗೆ ಬೇಕಾದ ನಿಗಮ-ಮಂಡಳಿಗಳನ್ನು ತೆಗೆದುಕೊಂಡು ಹೆಚ್ಚಿನ ಮಹತ್ವ ಇಲ್ಲದ ನಿಗಮ-ಮಂಡಳಿಗಳನ್ನು ನೀಡುತ್ತಿದ್ದರು. ಸ್ವತಂತ್ರ ತೀರ್ಮಾನ ಕೈಗೊಳ್ಳದೆ ಅತಂತ್ರದಲ್ಲಿದ್ದ ಕಾರಣ ಕಾರ್ಯಕರ್ತರ ದುಡಿಮೆಗೆ ತಕ್ಕಂತೆ ಸ್ಥಾನ ನೀಡಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೈತ್ರಿ ಸರ್ಕಾರದ ಪತನಕ್ಕಾಗಿ ಬಿಜೆಪಿ ನಾಯಕರು ಶ್ರಮ ಹಾಕಿ ಯಶಸ್ವಿಯಾದರು. ಸರ್ಕಾರದಲ್ಲಿ ಕೈ ಜೋಡಿಸಿದ ಕಾಂಗ್ರೆಸ್‌ನಲ್ಲಿಯೇ ಒಂದು ಗುಂಪು ಹಲವು ವಾಮಮಾರ್ಗಗಳಿಂದ ಕತ್ತಿ ಮಸಿಯುತ್ತಿತ್ತು. ಅಧಿಕಾರಕ್ಕೆ ಬಂದ ದಿನದಿಂದಲೂ ಅವರಲ್ಲಿ ಅಸಮಾಧಾನವಿತ್ತು. ಹಾಗಾಗಿ ಸರ್ಕಾರ ಮುಂದುವರೆಯಬಾರದೆಂದು ಪಿತೂರಿ ನಡೆಸಿತು ಎಂದು ಆರೋಪಿಸಿದರು.
ಅಭಿವೃದ್ಧಿ ಬೇಕಿಲ್ಲ :ಬಿಜೆಪಿಗೆ ನಾಡಿನ ಅಭಿವೃದ್ಧಿ ಬೇಕಾಗಿಲ್ಲ. ಬದಲಿಗೆ ಅಧಿಕಾರವನ್ನು ತಮ್ಮ ಕೈಯಲ್ಲಿ ಹಿಡಿದಿಟ್ಟುಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧವೂ ಕುಮಾರಸ್ವಾಮಿ ಕಿಡಿಕಾರಿದರು. ಬಿಜೆಪಿ ಸರ್ಕಾರ ಜನಪರ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಪ್ರವಾಹದಂತಹ ಸಂದರ್ಭದಲ್ಲಿಯೂ ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಎಡವಿದೆ.
ಅಲ್ಲದೇ, ಕೊರೊನಾದಿಂದಾಗಿ ನಾಡಿನ ಜನರ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೊಳಗಾಗಿದೆ. ಸೋಂಕಿತರನ್ನು ಕಾಣುವ ದೃಷ್ಠಿಕೋನ ಬೇರೆಯಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಗೆ ನಾಡಿನ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ. ಅದು ಪಕ್ಷದ ನಾಯಕರಿಗೆ ಬೇಕಾಗಿಯೂ ಇಲ್ಲ. ಅಧಿಕಾರವನ್ನು ತಮ್ಮ ಕೈಯಲ್ಲಿ ಹಿಡಿದಿಟ್ಟುಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಅಧಿಕಾರಕ್ಕಾಗಿ ಪಕ್ಷದಲ್ಲಿಯೇ ಗುದ್ದಾಟ ನಡೆಯುತ್ತಿದೆ ಎಂದು ಟೀಕಿಸಿದರು.