ಕರ್ನಾಟಕ

karnataka

ETV Bharat / state

ಇನ್ನೊಬ್ಬರು ಕುದುರೆ ಮೇಲಿದ್ದಾಗ ಅವರನ್ನು ಕೆಳಕ್ಕೆ ಕೆಡವಲು ಏಕೀ ಕೆಟ್ಟ ಉತ್ಸಾಹ? : ಹೆಚ್​ಡಿಕೆ

ಜನರ ಪಾಲಿನ ಮಗ್ಗುಲ ಮುಳ್ಳುಗಳು. ಮುಳ್ಳನ್ನು ಹೇಗೆ ತೆಗೆಯಬೇಕು ಎಂಬುದು ಜನರಿಗೆ ಗೊತ್ತಿದೆ. ಆ ಕಾಲವೂ ಹತ್ತಿರದಲ್ಲೇ ಇದೆ. ಇವರು ಅಧಿಕಾರದಲ್ಲಿದ್ದಾಗಲೇ ಕಾಂತರಾಜು ಆಯೋಗದ ವರದಿ ಬಂದಿತ್ತು. ಆಗಲೇ ಅಂಗೀಕರಿಸಿ ಬಿಡುಗಡೆ ಮಾಡಬಹುದಿತ್ತಲ್ಲ? ಎಂದು ಸಿದ್ದರಾಮಯ್ಯರನ್ನು ಹೆಚ್​ಡಿಕೆ ಪ್ರಶ್ನಿಸಿದ್ದಾರೆ.

By

Published : Sep 8, 2021, 10:58 PM IST

Updated : Sep 9, 2021, 7:23 AM IST

H D kumaraswamy spark against Siddaramaiah
H D kumaraswamy spark against Siddaramaiah

ಬೆಂಗಳೂರು: 'ಎಲೆಕ್ಷನ್' ಬಂದಾಗ ಯಾವುದೋ ಒಂದು ವಿಷಯ ಆಯ್ಕೆ ಮಾಡಿಕೊಂಡು ಪ್ರಚಾರ ಗಿಟ್ಟಿಸುವುದು ಸರಿಯಲ್ಲ. ಅಧಿಕಾರ ಇದ್ದಾಗಲೇ ಸಲ್ಲಿಕೆಯಾಗಿದ್ದ ಈ ವರದಿಯನ್ನು ಬಿಡುಗಡೆ ಮಾಡಲು ನಿರ್ಲಕ್ಷ್ಯ ತೋರಿದ್ದು ಯಾಕೆ? ಕುದುರೆ ಇದ್ದಾಗಲೇ ಏರಲಿಲ್ಲ, ಇನ್ನೊಬ್ಬರು ಕುದುರೆ ಮೇಲಿದ್ದಾಗ ಅವರನ್ನು ಕೆಳಕ್ಕೆ ಕೆಡವಲು ಏಕೀ ಕೆಟ್ಟ ಉತ್ಸಾಹ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜಕಾರಣದಲ್ಲಿ ಕ್ಷಣಕ್ಕೊಂದು ಬಣ್ಣ ಬದಲಿಸಿಕೊಂಡು ಓಡಾಡುವವರ ಬಗ್ಗೆ ನನಗೆ ಗೊತ್ತಿದೆ. ಇವರು ರಾಜಕೀಯ ಊಸರವಳ್ಳಿಗಳು, ಜನರ ಪಾಲಿನ ಮಗ್ಗುಲ ಮುಳ್ಳುಗಳು. ಮುಳ್ಳನ್ನು ಹೇಗೆ ತೆಗೆಯಬೇಕು ಎಂಬುದು ಜನರಿಗೆ ಗೊತ್ತಿದೆ. ಆ ಕಾಲವೂ ಹತ್ತಿರದಲ್ಲೇ ಇದೆ. ಇವರು ಅಧಿಕಾರದಲ್ಲಿದ್ದಾಗಲೇ ಕಾಂತರಾಜು ಆಯೋಗದ ವರದಿ ಬಂದಿತ್ತು. ಆಗಲೇ ಅಂಗೀಕರಿಸಿ ಬಿಡುಗಡೆ ಮಾಡಬಹುದಿತ್ತಲ್ಲ? ಹಾಗೆ ಮಾಡಲಿಲ್ಲ, ಯಾಕೆ?, ಅವಕಾಶ ಇದ್ದಾಗ ಮಾಡದೇ ಈಗ ಆಷಾಢಭೂತಿತನ ಏಕೆ? ಜನರಿಗೆ ಅರ್ಥವಾಗದೆಂಬ ಅತಿಬುದ್ಧಿವಂತಿಕೆಯೇ? ಅತಿ ಬುದ್ಧಿವಂತರೆಲ್ಲ ಆಮೇಲೆ ಏನಾದರು? ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಸಹಿ ಇಲ್ಲದ ವರದಿ ಸಲ್ಲಿಸಲಾಗಿದೆ’ ಎಂದು ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ಸಹಿಯೇ ಇಲ್ಲದ ವರದಿ ಅಧಿಕೃತ ಹೇಗಾಗುತ್ತದೆ? ಐದು ವರ್ಷ ಆಡಳಿತ ನಡೆಸಿದವರಿಗೆ, ಸಂವಿಧಾನದ ಬಗ್ಗೆ ಹಾದಿಬೀದಿಯಲ್ಲಿ ನಿಂತು ಪಾಠ ಮಾಡುವವರಿಗೆ ಈ ಮಟ್ಟಿಗೆ ಜ್ಞಾನ ಇಲ್ಲವೇ?ಎಲ್ಲದರಲ್ಲೂ ಸಿದ್ಧಹಸ್ತರಾದರೆ ಉಪಯೋಗವೇನು? ಸತ್ಯ ಹೇಳುವುದಕ್ಕೂ ಗುಂಡಿಗೆ ಬೇಕು. ಇನ್ನೊಬ್ಬರ ಎದೆಗಾರಿಕೆ ಪ್ರಶ್ನಿಸುವ ಮಹಾನುಭಾವರು, ತಮ್ಮ ಅವಧಿಯಲ್ಲಿ ಈ ವರದಿನ್ನೇಕೆ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದರು ಎಂಬುದಕ್ಕೆ ಉತ್ತರ ನೀಡಲಿ ಎಂದು ಪ್ರಶ್ನಿಸಿದ್ದಾರೆ.

ಸಹಿ ಇಲ್ಲದ ಕಾಗದ ಪತ್ರಕ್ಕೆ ಬೆಲೆ ಇಲ್ಲ. ಅಪ್ಪ ಅಮ್ಮನಿಲ್ಲದ ಕೂಸು ಅನಾಥ. ಹಾಗಾದರೆ, ಸಹಿ ಇಲ್ಲದ ವರದಿ ಸ್ವೀಕಾರ ಮಾಡಿ, ಆಗ ಸುಮ್ಮನಿದ್ದು, ಈಗ ಹಾಹಾಕಾರ ಮಾಡಿದರೇನು ಪ್ರಯೋಜನ? ಊಸರವಳ್ಳಿ ಉಸಾಬರಿ ಎಂದರೆ ಇದೇ ಇರಬೇಕು ಎಂದು ಹೆಚ್​​ಡಿಕೆ ಟೀಕಿಸಿದ್ದಾರೆ.

Last Updated : Sep 9, 2021, 7:23 AM IST

ABOUT THE AUTHOR

...view details