ಬೆಂಗಳೂರು:ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಬಾಯಿಗೆ ರಿವಾಲ್ವರ್ ಇಟ್ಟಿದ್ದಾರೆ. ಬೆಲ್ಟ್ ನಿಂದ ಹೊಡೆದು ಹಿಂಸೆ ಕೊಟ್ಟಿದ್ದಾರೆ. ಅವತ್ತು ರಾತ್ರಿಯೇ ನಮ್ಮ ಕಾರ್ಯಕರ್ತರ ವಿರುದ್ಧ ಎಫ್ಐಆರ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸ್ ಪೇದೆಗಳಿಬ್ಬರು ಹಾಗೂ ಸಬ್ ಇನ್ಸ್ಪೆಕ್ಟರ್ ಸೇರಿ ನಮ್ಮ ಪಕ್ಷದ ಕಾರ್ಯಕರ್ತನನ್ನು ಮನಸೋಇಚ್ಛೆ ಹೊಡೆದಿದ್ದಾರೆ ಇದು ಹೇಯಕೃತ್ಯ ಎಂದು ಕಿಡಿಕಾರಿದರು.
ಜೆಡಿಎಸ್ ಕಾರ್ಯಕರ್ತನಿಗೆ ರಿವಾಲ್ವರ್ ಬಾಯಿಗಿಟ್ಟು ಹಿಂಸೆ ಆರೋಪ: ದೇವೇಗೌಡರಿಂದ ಖಂಡನೆ ಯಾದಗಿರಿಗೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದ್ದ ವೇಳೆ ಕೆಲವು ಯುವಕರು ಮತ್ತು ಜೆಡಿಎಸ್ ಕಾರ್ಯಕರ್ತರು ಸಿಎಂ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದ್ದ ಘಟನೆ ನಡೆದಿತ್ತು. ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ಪೊಲೀಸರು ಆ ಯುವಕರನ್ನು ಚದುರಿಸಿದ್ದರು. ಆದರೆ, ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಂಡು ಈಗ ನಿರಪರಾಧಿಗಳು ಮತ್ತು ಅಮಾಯಕರಿಗೆ ಹಿಂಸೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಘಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ಜೆಡಿಎಸ್ ಕಾರ್ಯಕರ್ತರ ಪೈಕಿ ಓರ್ವ ಶರಣಗೌಡ ಕುಂದಕೂರು ಜೆಡಿಎಸ್ ಶಾಸಕರ ಮಗ. ಇನ್ನೊಬ್ಬರು ಮಾರ್ಕಂಡಪ್ಪ ಮಾನೆಗಾರ್ ಗುರುಮಠಕಲ್ ಜೆಡಿಎಸ್ ಯುವಘಟಕದ ಕಾರ್ಯಾಧ್ಯಕ್ಷ. ನಮ್ಮ ಕಾರ್ಯಕರ್ತರ ಮನೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಾಪುಗೌಡ ಮತ್ತು ಪೇದೆಗಳು ಹೋಗಿ ಜೀಪಿನಲ್ಲಿ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದರು.
ಮಾರ್ಕಂಡಪ್ಪ ಮಾನೆಗಾರ್ ಎಂಬ ಕಾರ್ಯಕರ್ತನಿಗೆ ಮುಖ್ಯಮಂತ್ರಿ ಅವರು ಯಾದಗಿರಿಗೆ ತೆರಳಿದ್ದ ವೇಳೆ ಕಾರು ಅಡ್ಡಗಟ್ಟಲು ಹೇಳಿದ್ದು ಶರಣಗೌಡ ಕುಂದಕೂರು ಎಂದು ಲಿಖಿತವಾಗಿ ಬರೆದುಕೊಡು ಎಂದು ಅವವಾಜ್ ಹಾಕಿದ್ದಾರೆ. ಅಲ್ಲದೆ, ಆತನ ಬಾಯಲ್ಲಿ ಪಿಸ್ತೂಲ್ ಇಟ್ಟು ಬೆದರಿಕೆ ಹಾಕಿ, ಎನ್ಕೌಂಟರ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಹೆಚ್ಡಿಡಿ ದೂರಿದರು. ಅಲ್ಲದೆ, ನಾನು 50 ವರ್ಷ ರಾಜಕೀಯದಲ್ಲಿದ್ದೇನೆ. ಆದರೆ, ಪಿಸ್ತೂಲನ್ನು ಬಾಯಲ್ಲಿಟ್ಟು ಪೊಲೀಸ್ ಅಧಿಕಾರಿ ಈ ರೀತಿ ನಡೆದುಕೊಂಡಿರುವುದು ಇದೇ ಮೊದಲು. ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಈ ಕೃತ್ಯ ನಡೆದಿರುವುದು ದುರಾದೃಷ್ಟಕರ ಎಂದರು.
ಈ ವಿಷಯ ನನ್ನ ಗಮನಕ್ಕೆ ಬರುತ್ತಿದ್ದಂತೆ ನಾನು ಡಿಜಿಪಿ ಅವರಿಗೆ ಫೋನ್ ಮಾಡಿದ್ದೆ. ಅವರು ಶಿಸ್ತು ಕ್ರಮದ ಭರವಸೆ ಕೊಟ್ಟರು. ಆದರೆ, ಕ್ರಮ ತೆಗೆದುಕೊಳ್ಳಲು ಆತಂಕ ಇರುವುದನ್ನು ಡಿಜಿಪಿ ಅವರೇ ಒಪ್ಪಿಕೊಂಡಿದ್ದಾರೆ. ಸರ್ಕಾರವೇ ಹಲ್ಲೆ ನಡೆಸಿದ ಅಧಿಕಾರಿಗಳ ಬೆನ್ನಿಗೆ ನಿಂತಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆಂದರೆ ಇದಕ್ಕಿಂತ ವಿಪರ್ಯಾಸ ಬೇರೇನೂ ಇಲ್ಲ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಅವರು ಈ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ನಮಗೂ ಇದೆ. ಸರ್ಕಾರ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ದೇವೇಗೌಡರು ಹೇಳಿದ್ರು.