ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ 91ನೇ ಜನ್ಮದಿನದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಭ ಕೋರಿದ್ದಾರೆ. ಟ್ವೀಟ್ ಮಾಡಿರುವ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ನನ್ನ ಪೂಜ್ಯ ತಂದೆಯವರಾದ ದೇವೇಗೌಡ ಅವರಿಗೆ 91ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ನನ್ನ ಭಕ್ತಿಪೂರ್ವಕ ಪ್ರಣಾಮಗಳು ಎಂದಿದ್ದಾರೆ.
"ನನ್ನ ಶಕ್ತಿ, ಪ್ರೇರಣೆ, ದಾರಿದೀಪ ಆಗಿರುವ ದೇವೇಗೌಡರು ಜೆಡಿಎಸ್ ಪಾಲಿನ ಮಹಾನ್ ಚೈತನ್ಯ. ದೇಶ ಮತ್ತು ಕನ್ನಡನಾಡಿಗೆ ಅವರ ಕೊಡುಗೆ ಅವಿಸ್ಮರಣೀಯ. ಅವರ ಅನುಭವ ಧಾರೆ ನಮಗೆಲ್ಲ ಅಮೃತಧಾರೆ. ಆ ಭಗವಂತ ಶ್ರೀಯುತರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ. ಅವರು ನಮ್ಮೆಲ್ಲರನ್ನು ಇನ್ನೂ ದೀರ್ಘಕಾಲ ಮುನ್ನಡೆಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ತಿಳಿಸಿದ್ದಾರೆ.
ಶುಭಕೋರಿದ ಪ್ರಧಾನಿ ಮೋದಿ: ''ನಮ್ಮ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ನಮ್ಮ ದೇಶಕ್ಕೆ ಅವರ ಕೊಡುಗೆ ಗಮನಾರ್ಹವಾಗಿದೆ. ದೇವೇಗೌಡರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ'' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ : ''ಮಾಜಿ ಪ್ರಧಾನಿ ಮತ್ತು ಜನತಾದಳದ ಹಿರಿಯ ನಾಯಕರಾದ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಾನು ಅವರಿಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ. ಕನ್ನಡಿಗರ ಮತ್ತು ನಮ್ಮ ನೆಲ, ಜಲ ಮತ್ತು ಭಾಷೆಯ ಹಿತವನ್ನು ಕಾಪಾಡಲು ಅವರು ನಮಗೆ ಮಾರ್ಗದರ್ಶನ ನೀಡಲಿ'' ಎಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.