ತರಾತುರಿಯಲ್ಲಿ ರಾಮ ಮಂದಿರ ಉದ್ಘಾಟನೆ ಬೆಂಗಳೂರು : ಬಿಜೆಪಿಯವರು ರಾಮನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ರಾಮಮಂದಿರ ಪೂರ್ಣಗೊಂಡಿಲ್ಲ. ಆಗಲೇ ತರಾತುರಿಯಲ್ಲಿ ದೇವಸ್ಥಾನ ಉದ್ಘಾಟನೆ ಮಾಡುತ್ತಿದ್ದಾರೆ. ಇದು ಚುನಾವಣೆ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಜಾತಿ ಜನರನ್ನ ಕರೆಯಬೇಕಿತ್ತು. ಎಲ್ಲ ಜಾತಿ ಜನ ರಾಮನ ಭಕ್ತರಿದ್ದಾರೆ. ನಾವು ಹಿಂದೂಗಳಲ್ಲ ಅಂತ ಹೇಳಿಲ್ಲ. ರಾಮನ ಪೂಜೆಗೂ ನಮ್ಮ ವಿರೋಧವಿಲ್ಲ. ನಾವೆಲ್ಲರೂ ಹಿಂದೂಗಳೇ. ರಾಮನ ಪೂಜೆಯನ್ನೂ ಮಾಡುತ್ತಿಲ್ವೇ?. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬೇಕಾದಂತೆ ಮಾತನಾಡುತ್ತಾರೆ ಎಂದರು.
ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಬೇಕಾದರೆ ಹೋಗುತ್ತೇವೆ, ಬಿಡುತ್ತೇವೆ. ಆದರೆ, ಬಿಜೆಪಿಯವರು ರಾಮನನ್ನು ಹೇಗೆ ಬಿಂಬಿಸುತ್ತಿದ್ದಾರೆ?. ಕಾರ್ಯಕ್ರಮಕ್ಕೆ ಎಲ್ಲರನ್ನೂ ಕರೆಯಬೇಕು. ಪಕ್ಷದವರೇ ಸೀಮಿತ ಮಾಡಿದರೆ ಹೇಗೆ?. ನಮಗೆ ಇಷ್ಟ ಬಂದಾಗ ರಾಮ ಮಂದಿರಕ್ಕೆ ಹೋಗುತ್ತೇವೆ ಎಂದು ಹೆಚ್. ಆಂಜನೇಯ ಹೇಳಿದರು.
ನಾನು ಭಿಕ್ಷುಕರಂತೆ ಕೇಳುವುದಿಲ್ಲ :ನಾನು ಪಕ್ಷ ಮೀರಿ ಬೆಳೆದವನು. ಎನ್ಎಸ್ಐಐ, ವಿವಿಧ ಘಟಕಗಳಿಂದ ಬಂದವನು. ನನಗೆ ಆ ಸ್ಥಾನ ಕೊಡಿ, ಈ ಸ್ಥಾನ ಕೊಡಿ ಎಂದು ನಾನು ಭಿಕ್ಷುಕರಂತೆ ಏನನ್ನೂ ಕೇಳಲ್ಲ. ನಾನು ಶಿಸ್ತಿನ ಸಿಪಾಯಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂದರು. ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಅಭ್ಯರ್ಥಿಗಳ ಕೊರತೆ ಏನಿಲ್ಲ. ಎಲ್ಲ ಕಡೆ ಅಭ್ಯರ್ಥಿಗಳಿದ್ದಾರೆ. ಕೆಲವು ಹಿತೈಸಿಗಳು ತಮ್ಮನ್ನು ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಆದರೆ, ನನಗೇನೂ ನಿಲ್ಲಬೇಕೆಂದಿಲ್ಲ. ಪಕ್ಷ ಹೇಳಿದರೆ ನಿಲ್ಲಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಯತ್ನಾಳ್ ರಿಜೆಕ್ಡೆಟ್ ಪೀಸ್ :ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನನ್ನು ತೀಕ್ಷಣವಾಗಿ ಲೇವಡಿ ಮಾಡಿದ್ದಾರೆ. ಆದರೆ, ಅವರನ್ನು ಅವರ ಪಕ್ಷದಲ್ಲೇ ದಿನಗೂಲಿ ಕಾರ್ಯಕರ್ತನಂತೆ ಕಾಣುತ್ತಿದ್ದಾರೆ. ಬಿಜೆಪಿಯಲ್ಲಿ ಯತ್ನಾಳ್ ರಿಜೆಕ್ಟೆಡ್ ಪೀಸ್. ಅವರು ಮಾತನಾಡುವಾಗ ನೋಡಿ ಮಾತನಾಡಬೇಕು. ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದೇ ದುರ್ದೈವ. ನನ್ನನ್ನು ಹಿಂದೂ ವಿರೋಧಿ ಅಂತ ಹೇಳುತ್ತಾರೆ. ಕೇಂದ್ರದಲ್ಲಿ ಮಂತ್ರಿ ಆಗಿ ಏನೂ ಮಾಡಲಿಲ್ಲ. ರಾಜ್ಯದಲ್ಲಿ ಅವರನ್ನ ಮಂತ್ರಿಯನ್ನಾಗಿಯೇ ಮಾಡಲಿಲ್ಲ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ :ಸೋಲಿನ ಭೀತಿಯಿಂದ ರಾಮಮಂದಿರದ ಬಗ್ಗೆ ಕಾಂಗ್ರೆಸ್ ಆರೋಪ : ನಿಖಿಲ್ ಕುಮಾರಸ್ವಾಮಿ