ಬೆಂಗಳೂರು: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ನೊಂದ ಯುವಕನೋರ್ವ ವಿಡಿಯೋ ಮೂಲಕ ನೋವು ತೋಡಿಕೊಂಡು, ಬಳಿಕ ನೇಣಿಗೆ ಶರಣಾದ ಘಟನೆ ಇಲ್ಲಿನ ರಾಜರಾಜೇಶ್ವರಿನಗರದ ಮಾರಪ್ಪ ಲೇಔಟ್ನಲ್ಲಿ ಶನಿವಾರ ರಾತ್ರಿ ನಡೆದಿದೆ.
29 ವರ್ಷದ ಕಾರ್ತಿಕ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಈತ ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ. ಆದರೆ ಇತ್ತೀಚೆಗೆ ಯುವತಿಯು ದೂರವಾಗಿದ್ದರಿಂದ ಕಾರ್ತಿಕ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.
ಮದುವೆಗೆ ತಯಾರಿ:
ಪ್ರೇಮ ವೈಫಲ್ಯದ ಬಗ್ಗೆ ಕಾರ್ತಿಕ್ ಆಪ್ತರ ಬಳಿ ಹೇಳಿಕೊಂಡಿದ್ದು, ಈ ವಿಚಾರ ತಿಳಿದ ಪೋಷಕರು ಮಗನಿಗೆ ಮದುವೆ ಮಾಡಲು ಮುಂದಾಗಿದ್ದರು. ಹೀಗಾಗಿ ಇಂದು ಕಾರ್ತಿಕ್ಗೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಪೋಷಕರು ತೆರಳಬೇಕಿತ್ತು. ಅದರೆ ನಿನ್ನೆ ರಾತ್ರಿ ಮನೆಯ ಶೀಟ್ ಹ್ಯಾಂಗರ್‌ಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮುನ್ನ ಕಾರ್ತಿಕ್ ಪ್ರೇಮ ವೈಫಲ್ಯದ ಬಗ್ಗೆ ತನ್ನ ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದು ನೋವು ತೋಡಿಕೊಂಡಿದ್ದಾನೆ.
ಮಾಹಿತಿ ತಿಳಿದ ರಾಜರಾಜೇಶ್ವರಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಸದ್ಯ ಕಾರ್ತಿಕ್ ಮೊಬೈಲ್ ಜಪ್ತಿ ಮಾಡಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಮೂವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಜಿಗಿದ ತಾಯಿ; ಮೂವರು ಸಾವು, ಓರ್ವ ಬಾಲಕಿ ರಕ್ಷಣೆ