ಕರ್ನಾಟಕ

karnataka

ETV Bharat / state

ಗುರುರಾಘವೇಂದ್ರ ಬ್ಯಾಂಕ್​ ಹಗರಣ : ಜಿ.ರಘುನಾಥ್​ಗೆ ಜಾಮೀನು ಮಂಜೂರು - High Court

ಜಿ.ರಘುನಾಥ್​ಗೆ ವೈದ್ಯಕೀಯ ಕಾರಣಗಳನ್ನು ಆಧರಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

High Court
ಹೈಕೋಟ್​

By

Published : May 1, 2023, 10:41 PM IST

ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ ಹಗರಣದಲ್ಲಿ ಭದ್ರತೆ ಇಲ್ಲದೆ 105 ಕೋಟಿ ರೂ. ಸಾಲ ಪಡೆದ ಆರೋಪ ಎದುರಿಸುತ್ತಿದ್ದ ಜಿ.ರಘುನಾಥ್ ಎಂಬುವರಿಗೆ ವೈದ್ಯಕೀಯ ಕಾರಣಗಳನ್ನು ಆಧರಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹಣ ದುರ್ಬಳಕೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಹೂಡಿದ್ದ ಪ್ರಕರಣದಲ್ಲಿ ರಘುನಾಥ್ ನ್ಯಾಯಾಂಗ ಬಂಧನದಲ್ಲಿದ್ದರು. ಇವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್​ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಇದನ್ನೂ ಓದಿ :ಅತ್ಯಾಚಾರ ಮಾಡಿದವನನ್ನೇ ಮದುವೆಯಾಗುತ್ತೇನೆಂದು ಸಂತ್ರಸ್ತೆ ಹೇಳಿಕೆ: ಆರೋಪಿಗೆ ಜಾಮೀನು

ಆರೋಪಿ ತಮ್ಮ ಪಾಸ್‌ಪೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸುವುದಲ್ಲದೆ, ವೈಯಕ್ತಿಕವಾಗಿ 25 ಲಕ್ಷ ಮೊತ್ತದ ಎರಡು ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಶ್ಯೂರಿಟಿ ನೀಡಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ, ಕೋರ್ಟ್ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ. ಆರೋಪಿ 10 ತಿಂಗಳಿಂದ ನ್ಯಾಯಾಂಗ ವಶದಲ್ಲಿದ್ದಾರೆ. ಅಲ್ಲದೆ, ಸೆಷನ್ಸ್ ಕೋರ್ಟ್ ಇಂತಹದೇ ಆರೋಪ ಎದುರಿಸುತ್ತಿದ್ದವರಿಗೆ ಜಾಮೀನು ನೀಡಿದೆ. ಅದೇ ಆಧಾರದಲ್ಲಿ ಅರ್ಜಿದಾರರಿಗೂ ಜಾಮೀನು ನೀಡುತ್ತಿರುವುದಾಗಿ ಹೈಕೋರ್ಟ್​ ತಿಳಿಸಿದೆ.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ಆರೋಪಿ ಸರ್ವಿಕಲ್ ಸ್ಪಾಂಡಿಲೈಸಿಸ್, ಇರಿಟಬಲ್ ಬೊವೆಲ್ ಡಿಸಾರ್ಡರ್, ಲಿವರ್ ತೊಂದರೆ, ಅಧಿಕ ರಕ್ತದೊತ್ತಡ, ಮಾನಸಿಕ ಖಿನ್ನತೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದು, ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಧಾರದಲ್ಲಿ ಜಾಮೀನು ನೀಡಬೇಕೆಂದು ನ್ಯಾಯಪೀಠವನ್ನು ಕೋರಿದ್ದರು.

ಇದನ್ನೂ ಓದಿ :ಮುಂದಿನ ಆರು ತಿಂಗಳಲ್ಲಿ ರಾಜ್ಯದ ಮೂರು ಕಂದಾಯ ವಿಭಾಗಗಳಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ಸ್ಥಾಪಿಸಲು ಹೈಕೋರ್ಟ್ ಶಿಫಾರಸು

ಆದರೆ ಜಾರಿ ನಿರ್ದೇಶನಾಲಯದ ಪರ ವಕೀಲರು, ಆರ್‌ಬಿಐನ ಸಾಂಸ್ಥಿಕ ವರದಿಯ ಪ್ರಕಾರ ಬ್ಯಾಂಕ್‌ನ 24 ಪ್ರಮುಖ ಫಲಾನುಭವಿಗಳಲ್ಲಿ ರಘುನಾಥ್ ಒಬ್ಬರಾಗಿದ್ದು, ಅವರು 105 ಕೋಟಿ ರೂ. ಸಾಲ ಪಡೆದಿದ್ದಾರೆ. ಮತ್ತು 45 ಕೋಟಿ ರೂ.ಗಳನ್ನು ಸಮೃದ್ಧಿ ಎಂಟರ್ ಪ್ರೈಸಸ್ ಗೆ ವರ್ಗಾವಣೆ ಮಾಡಿದ್ದಾರೆ. ಗುರು ರಾಘವೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಕೃಷ್ಣ ಅವರ ಹೇಳಿಕೆಯಂತೆ, ಇಡಿ ಹಲವು ಬಾರಿ ರಘುನಾಥ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಆದರೆ ನಗದು ಸ್ವೀಕರಿಸಿದ 20 ಕೋಟಿಗೆ ಅವರು ಯಾವುದೇ ಲೆಕ್ಕ ನೀಡಿಲ್ಲ. ಅಲ್ಲದೆ, ತಮ್ಮ ಸ್ನೇಹಿತ ರಮೇಶ್​ಗೆ ಸಮೃದ್ಧಿ ಎಂಟರ್ ಪ್ರೈಸಸ್ ಹೆಸರಿನಲ್ಲಿ 30ರಿಂದ 25ಕೋಟಿ ರೂ ಸಾಲ ಕೊಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ :ತಾಯಿ ನಿಧನದಿಂದ ದಾಖಲೆ ಪರಿಶೀಲನೆಗೆ ಗೈರು.. ವೈದ್ಯೆಯನ್ನು ವೈದ್ಯಾಧಿಕಾರಿ ಹುದ್ದೆಗೆ ಪರಿಗಣಿಸುವಂತೆ ಹೈಕೋರ್ಟ್​ ಸೂಚನೆ

ABOUT THE AUTHOR

...view details