ಬೆಂಗಳೂರು: ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವಿಶೇಷವಾಗಿ ಗುರುಪೂರ್ಣಿಮೆ ಆಚರಿಸಲಾಯಿತು. ಶಿರಡಿ ಸಾಯಿ ಬಾಬಾರಿಗೆ ವಿಶೇಷ ಅಲಂಕಾರ, ವೈಭವದ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಜರುಗಿದವು. ಶಿರಡಿ ಬಾಬಾರನ್ನು 20 ಸಾವಿರ ತೆಂಗಿನಕಾಯಿ, 2,500 ಪರಂಗಿ, ಹಲಸಿನ ಹಣ್ಣು, 5,000 ಬೆಲ್ಲದ ಅಚ್ಚುಗಳು, 25, 000ಕ್ಕೂ ಕ್ಕೂ ಹೆಚ್ಚು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳ ಮೂಲಕ ವಿಶೇಷ ಅಲಂಕಾರ ಮಾಡಲಾಗಿತ್ತು.
ಗುರುಪೂರ್ಣಿಗೆ ಬಾಬಾ ಹಿಂದೆಂದಿಗಿಂತಲೂ ಈ ಬಾರಿ ವಿಶೇಷವಾಗಿ ಕಂಗೊಳಿಸಿದರು. ಕಂದು ಬಣ್ಣದ ಎಳನೀರಿನಿಂದಲೂ ವಿಶೇಷ ಅಲಂಕಾರ ಮಾಡಲಾಗಿದೆ ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್ ರಾಜ್ ತಿಳಿಸಿದರು. ಸಾಯಿ ಬಾಬಾರಿಗೆ ಅಲಂಕಾರ ಮಾಡಿದ ಎಲ್ಲ ವಸ್ತುಗಳನ್ನು ಮರಳಿ ಭಕ್ತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಹಣ್ಣಾದ ಪರಂಗಿ, ಹಲಸು ಮತ್ತಿತರ ಆಹಾರ ವಸ್ತುಗಳನ್ನು ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಸಮರ್ಪಿಸಲಾಗುತ್ತಿದೆ. ಕಳೆದ ವರ್ಷ ಕ್ರೀಡಾ ಪರಿಕರಗಳಿಂದ ಬಾಬಾ ರನ್ನು ಸಿಂಗರಿಸಲಾಗಿತ್ತು. ನಂತರ 500 ಶಾಲೆಗಳಿಗೆ ಈ ವಸ್ತುಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.
ನಿರಂತರ ಪ್ರಸಾದ ವಿತರಣೆ:ಗುರು ಪೂರ್ಣಿಮೆ ನಿಮಿತ್ತ ಗುರು ಶಿರಡಿ ಬಾಬಾರಿಗೆ ಅಭಿಷೇಕ, ಹೋಮ, ಪ್ರಸಾದ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ ಒಳಗೊಂಡಂತೆ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿದೆ. ಇಂದು ಬೆಳಗ್ಗೆಯಿಂದ ರಾತ್ರಿವರೆಗೆ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬೇಧ-ಭಾವವಿಲ್ಲದೆ ದರ್ಶನ ವ್ಯವಸ್ಥೆ:ಪ್ರತಿವರ್ಷ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿದೆ. ಬಾಬಾರ ಸಬ್ ಕಾ ಮಾಲೀಕ್ ಏಕ್ ಹೇ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಎನ್ನುವ ಬೇಧ - ಭಾವವಿಲ್ಲದೇ ಎಲ್ಲ ಸಮುದಾಯದವರಿಗೆ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.