ಬೆಂಗಳೂರು:ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ತನ್ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ನಡೆಸಿರುವ ಪ್ರಕರಣದ ತನಿಖಾ ವರದಿ ಸಲ್ಲಿಸುವಂತೆ ಹಾಗೂ ಆಸ್ತಿ ಮುಟ್ಟುಗೋಲಿಗೆ ಕ್ರಮ ಜರುಗಿಸುವಂತೆ ಉಚ್ಛ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ(ಇಡಿ) ನಿರ್ದೇಶಿಸಿದೆ.
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ: ವರದಿ ನೀಡಲು ಇಡಿಗೆ ಹೈಕೋರ್ಟ್ ನಿರ್ದೇಶನ
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದ ತನಿಖಾ ವರದಿ ನೀಡುವಂತೆ ಇಡಿ(ಜಾರಿ ನಿರ್ದೇಶನಾಲಯ)ಕ್ಕೆ ಹೈಕೋರ್ಟ್ ನಿರ್ದೇಶನ ಮಾಡಿದೆ.
ಸಹಕಾರ ಬ್ಯಾಂಕ್ ಹಾಗೂ ಅಂಗ ಸಂಸ್ಥೆಯಾದ ಸೊಸೈಟಿಯಲ್ಲಿ ಠೇವಣಿದಾರರ ಹಣ ದುರ್ಬಳಕೆ ಮಾಡಿರುವ ಹಗರಣದ ತನಿಖೆಯನ್ನು ಡಿಐಜಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಕೋರಿ ಬಸವನಗುಡಿ ನಿವಾಸಿ ನರಸಿಂಹಮೂರ್ತಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಪ್ರಕರಣದ ಸಂಬಂಧ ಎಸಿಬಿ ಮತ್ತು ಸಿಐಡಿ ಎರಡೂ ತನಿಖಾ ಸಂಸ್ಥೆಗಳು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿವೆ. ಅವುಗಳನ್ನು ಒಂದುಗೂಡಿಸಿ ತನಿಖೆ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು. ಜೊತೆಗೆ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯಡಿ ಬ್ಯಾಂಕ್ ಹಾಗೂ ಸೊಸೈಟಿಯ ಪದಾಧಿಕಾರಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಜರುಗಿಸಬೇಕು ಎಂದು ಇಡಿಗೆ ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಜುಲೈ 1 ಕ್ಕೆ ಮುಂದೂಡಿತು.