ಬೆಂಗಳೂರು: ನಗರದ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದಲ್ಲಿ, ಹಣ ಕಳೆದುಕೊಂಡಿರುವ ಠೇವಣಿದಾರರ ಪರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ವಾದ ಮಂಡನೆಗಿಳಿದಿದ್ದಾರೆ. ಬ್ಯಾಂಕ್ನಲ್ಲಿ ಅವ್ಯವಹಾರ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ, ಸರ್ಕಾರ ಬ್ಯಾಂಕ್ಗೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ: ವಾದ ಮಂಡನೆಗಿಳಿದ ಸಂಸದ ತೇಜಸ್ವಿ ಸೂರ್ಯ - ವಾದ ಮಂಡನೆಗಿಳಿದ ಸಂಸದ ತೇಜಸ್ವಿ ಸೂರ್ಯ
ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿನ ಅವ್ಯವಹಾರವು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಸರ್ಕಾರ ಬ್ಯಾಂಕ್ಗೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ವಾದ ಮಂಡನೆಗೆ ಇಳಿದಿದ್ದಾರೆ.
![ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ: ವಾದ ಮಂಡನೆಗಿಳಿದ ಸಂಸದ ತೇಜಸ್ವಿ ಸೂರ್ಯ Guru Raghavendra Cooperative Bank Scam](https://etvbharatimages.akamaized.net/etvbharat/prod-images/768-512-7589113-thumbnail-3x2-smk.jpg)
ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇಂದು ನ್ಯಾ. ಪಿ. ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಠೇವಣಿದಾರರ ಪರ ಹಾಜರಾದ ಸಂಸದ ಹಾಗೂ ವಕೀಲ ತೇಜಸ್ವಿ ಸೂರ್ಯ ಮಧ್ಯಂತರ ಅರ್ಜಿ ಸಲ್ಲಿಸಿ ಬ್ಯಾಂಕ್ ಅಧ್ಯಕ್ಷರು ಸಲ್ಲಿಸಿರುವ ಮನವಿಯನ್ನು ವಜಾಗೊಳಿಸುವಂತೆ ಕೋರಿದರು.
ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಒಪ್ಪಿದ ಪೀಠ, ಕಲಾಪವನ್ನು ಜೂನ್ 19 ಕ್ಕೆ ಮುಂದೂಡಿತು. ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, ನಮ್ಮ ಕ್ಷೇತ್ರದ ಠೇವಣಿದಾರರು ಈ ಸಹಕಾರಿ ಬ್ಯಾಂಕ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅವರಿಗೆ ಅನುಕೂಲವಾಗಬೇಕು ಎಂಬ ಆಲೋಚನೆಯಿಂದ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದೇವೆ ಎಂದರು.