ಬೆಂಗಳೂರು: ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ರಾಮಕೃಷ್ಣ ಬಂಧನ ಮಾಡುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಕಲಿ ದಾಖಲೆ ಮೂಲಕ ಅಕೌಂಟ್ ಸೃಷ್ಟಿಸಿ ನೂರಾರು ಕೋಟಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಬಳಿಕ ಸಿಐಡಿ ವಿಶೇಷ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಈ ಹಿಂದೆ ರಾಜ್ಯಸಭಾ ಚುನಾವಣೆಗೂ ಸ್ಪರ್ಧಿಸಿದ್ದ. ಇನ್ನು ಕೇಸ್ ದಾಖಲಾಗ್ತಾ ಇದ್ದ ಹಾಗೆ ರಾಮಕೃಷ್ಣ ಎಸ್ಕೇಪ್ ಆಗಿದ್ದ.
ಬಸವನಗುಡಿಯ ಶ್ರೀ ಗುರು ರಾಘವೇದ್ರ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿರುವ ಕಾರಣ ಇತ್ತೀಚೆಗೆ ಎಸಿಬಿ ಅಧಿಕಾರಿಗಳ ತಂಡ ಶ್ರೀ ಗುರು ರಾಘವೇದ್ರ ಕೋ ಆಪರೇಟಿವ್ ಮಾಜಿ ಸಿಇಒ ವಾಸುದೇವ್ ಮಯ್ಯ ಮನೆ, ಕಚೇರಿ ಹಾಗೂ ಇತರೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿತ್ತು. ನಂತರ ಪ್ರಕರಣ ಗಂಭೀರವಾಗಿರುವ ಕಾರಣ ಸಿಐಡಿಗೆ ವರ್ಗಾವಣೆಯಾಗಿ ತನಿಖೆ ಮಾಡುವಾಗ ಶ್ರೀ ಗುರು ರಾಘವೇದ್ರ ಕೋ ಆಪರೇಟಿವ್ ಮಾಜಿ ಸಿಇಒ ವಾಸುದೇವ್ ಮಯ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದಲ್ಲಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಪಾತ್ರ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಈತನ ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿತ್ತು ಸಿಐಡಿ. ಸದ್ಯ ಆರೋಪಿಯನ್ನ ಬಂಧಿಸಿ ಹೆಚ್ವಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇತರೆ ಬಂಧಿತ ಆರೋಪಿಗಳಾದ ರಾಮಕೃಷ್ಣ ಆಪ್ತರಾದ ಕೃಷ್ಣ ಮೂರ್ತಿ ಎ.ಎಸ್., ಅಚ್ಚಣ್ಣ, ಲಕ್ಷ್ಮಿ ನಾರಾಯಣಾಚಾರ್ಯ, ದ್ವಾರಕನಾಥ್, ಗಣೇಶ್ ಭಟ್, ರಮೇಶ್ ಇವರನ್ನ ಬಂಧಿಸಿ ವಸಂತನಗರದ ಗುರುನಾನಕ್ ಬಳಿಯಿರುವ ಕೋರ್ಟ್ಗೆ ಹಾಜರುಪಡಿಸಲಾಗಿದೆ. ಸದ್ಯ ನಾಲ್ಕು ದಿವಸಗಳ ಕಾಲ ಸಿಐಡಿ ವಶಕ್ಕೆ ಪಡೆಯಲಾಗಿದೆ.