ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಕ್ರೆಡಿಟ್ ಸೊಸೈಟಿ ಹಗರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಆಧ್ಯಕ್ಷ ಕೆ. ರಾಮಕೃಷ್ಣ ಅವರನ್ನು ಬಂಧಿಸಲು ಶೀಘ್ರ ಕ್ರಮ ಜರುಗಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಹಗರಣದ ತನಿಖೆ ಕೋರಿ ಕೆ. ಆರ್. ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ತನಿಖೆಯ ಪ್ರಗತಿ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ವರದಿ ಪರಿಶೀಲಿಸಿದ ಪೀಠ, ಪ್ರಕರಣದ ಪ್ರಮುಖ ಆರೋಪಿಯಾದ ಕೆ. ರಾಮಮಕೃಷ್ಣ ಅವರನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ಆರೋಪಿ ಬಂಧಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿತು.
ಬ್ಯಾಂಕ್ ಪರ ವಾದಿಸಿದ ವಕೀಲರು ಅಧ್ಯಕ್ಷ ರಾಮಕೃಷ್ಣ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಿದ್ದೂ ಪೊಲೀಸರ ಕಾಲ್ ಡಿಟೇಲ್ ರಿಜಿಸ್ಟರ್(ಸಿಡಿಐರ್) ಮಾಹಿತಿಯಂತೆ ರಾಣೆಬೆನ್ನೂರಿನಲ್ಲಿ ಮೂರು ದಿನಗಳ ಹಿಂದೆ ಇದ್ದುದು ಪತ್ತೆಯಾಗಿದೆ. ಅವರು ಯಾವುದೇ ರಾಜಕೀಯ ಪ್ರಭಾವವನ್ನು ಹೊಂದಿಲ್ಲ. ಈ ವಿಚಾರಗಳನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರಾದ ವೆಂಕಟೇಶ್ ದಳವಾಯಿ ಅವರು ವಾದಿಸಿ, ಸರ್ಕಾರ ನೇಮಿಸಿರುವ ಬ್ಯಾಂಕ್ನ ಆಡಳಿತಾಧಿಕಾರಿ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರಾದರೂ, ಅವರಿಗೆ ಬೇರೆ ಇಲಾಖೆಯ ಹೆಚ್ಚುವರಿ ಹೊಣೆಗಾರಿಕೆ ಇರುವುದರಿಂದ ದಿನಕ್ಕೆ ಒಂದೆರಡು ಗಂಟೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬ್ಯಾಂಕಿಂಗ್ ರೆಗ್ಯೂಲೇಷನ್ ಆ್ಯಕ್ಟ್ ನ ಸೆಕ್ಷನ್ 35 ಎಬಿ ಅಡಿ ಪ್ರಾಧಿಕಾರ ನೇಮಿಸಬೇಕು ಎಂದು ಮನವಿ ಮಾಡಿದರು.
ಇನ್ನು ಆರ್ಬಿಐ ಪರ ವಕೀಲು ಮಾಹಿತಿ ನೀಡಿ ಬ್ಯಾಂಕ್ ಹಗರಣದ ಸಂಬಂಧ ಮೂರು ಆಡಿಟ್ಗಳನ್ನು ಮಾಡಿಸಲಾಗುತ್ತಿದೆ. ಆರ್ಬಿಐ ಕೈಗೊಂಡಿರುವ ಫೋರೆನ್ಸಿಕ್ ಆಡಿಟ್ ಮುಕ್ತಾಯಗೊಂಡಿದೆ. ಇನ್ನು ಸಹಕಾರ ಇಲಾಖೆ ಮತ್ತು ಸರ್ಕಾರದಿಂದ ನೇರವಾಗಿ ನಡೆಸುತ್ತಿರುವ ಆಡಿಟ್ಗಳು ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಎಂದರು.
ವಾದ-ಪ್ರತಿವಾದ ಆಲಿಸಿದ ಪೀಠ, ತನಿಖಾಧಿಕಾರಿಗಳು ಆರೋಪಿ ಕೆ. ರಾಮಕೃಷ್ಣ ಅವರನ್ನು ಬಂಧಿಸಲು ವಿಶೇಷ ತಂಡ ರಚಿಸಿರುವುದಾಗಿ ಹೇಳಿದ್ದಾರೆ. ಆದರೆ. ಈವರೆಗೂ ಅವರನ್ನು ಬಂಧಿಸದೇ ಇರುವದು ಪೊಲೀಸರ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ಶೀಘ್ರವಾಗಿ ಆರೋಪಿ ಬಂಧಿಸಲು ಕ್ರಮ ಜರುಗಿಸಬೇಕು. ಈ ಕುರಿತು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಇನ್ನು ಆಡಳಿತಾಧಿಕಾರಿ ಬ್ಯಾಂಕಿನಲ್ಲಿ ಹೆಚ್ಚಿನ ಸಮಯ ಕರ್ತವ್ಯ ನಿರ್ವಹಿಸಲು ಅವರಿಗಿರುವ ಹೆಚ್ಚುವರಿ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಸರ್ಕಾರ 2 ವಾರಗಳಲ್ಲಿ ಕ್ರಮ ಕೈಗೊಳ್ಳಬೇಕು. ಇನ್ನು ಬ್ಯಾಂಕ್ ನ ಸಾಲಗಾರರು ಹಣ ಹಿಂದಿರುಗಿ ಪಾವತಿಸಲು ಆಡಳಿತಾಧಿಕಾರಿ ಅಗತ್ಯ ಸೂಚನೆ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿತು.