ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಚರ್ಚೆಯಲ್ಲಿಂದು ಗುಜರಾತ್ ಗಲಭೆ ವಿಷಯ ಚರ್ಚೆಗೆ ಬಂತು. ಆಡಳಿತ ಪಕ್ಷದ ಆಕ್ಷೇಪದ ನಡುವೆಯೂ ಜೆಡಿಎಸ್ ಸದಸ್ಯರು ಪಟ್ಟು ಬಿಡದೆ ವಿಷಯ ಪ್ರಸ್ತಾಪಿಸಿ ಕೆಲಕಾಲ ಮಾತಿನ ಚಕಮಕಿಗೆ ವೇದಿಕೆ ಸೃಷ್ಟಿಸಿದರು. ಅಂತಿಮವಾಗಿ ಉಪ ಸಭಾಪತಿ ಪ್ರಾಣೇಶ್ ಮಧ್ಯಪ್ರವೇಶಿಸಿ ವಿಷಯಕ್ಕೆ ತೆರೆ ಎಳೆದರು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಜೆಡಿಎಸ್ ಸದಸ್ಯ ಮಂಜೇಗೌಡ, ಸರ್ಕಾರವನ್ನು ಟೀಕಿಸಿದರು. ಜನೋಪಯೋಗಿ ಯೋಜನೆಗಳಿಲ್ಲ, ಶಿಕ್ಷಣ, ಆರೋಗ್ಯ ಉಚಿತ ಮಾಡುವ ಪ್ರಸ್ತಾಪ ಇಲ್ಲ, ನಾವು ಪಂಚರತ್ನ ಮಾಡುತ್ತಿದ್ದೇವೆ. ಇಂತಹ ಯಾವುದೇ ಅಂಶ ರಾಜ್ಯಪಾಲರ ಭಾಷಣದಲ್ಲಿ ಇಲ್ಲ ಎಂದರು. ಈ ವೇಳೆ ಮಧ್ಯಪ್ರದೇಶ ಮಾಡಿದ ಸರ್ಕಾರಿ ಮುಖ್ಯ ಸಚೇತಕ ನಾರಾಯಣಸ್ವಾಮಿ, ಶಿಕ್ಷಣ, ಆರೋಗ್ಯ ಉಚಿತ ಯೋಜನೆಗಳನ್ನು ನಿಮ್ಮ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಯಾಕೆ ತರಲಿಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಒಮ್ಮೆ ಬಿಜೆಪಿ ಸಹಕಾರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸಹಕಾರದಲ್ಲಿ ಮುಖ್ಯಮಂತ್ರಿ ಆಗಿದ್ದರಲ್ಲ, ಆಗ ಯಾಕೆ ಇದೆಲ್ಲಾ ಮಾಡಲಿಲ್ಲ? ಎಂದು ಕಾಲೆಳೆದರು.
ನಂತರ ಮಾತು ಮುಂದುವರೆಸಿದ ಮಂಜೇಗೌಡ, ಗುಜರಾತ್ ನರಮೇಧ ಪ್ರಸ್ತಾಪಿಸಿದರು. ಇದಕ್ಕೆ ಸಚಿವ ಗೋಪಾಲಯ್ಯ ಆಕ್ಷೇಪ ವ್ಯಕ್ತಪಡಿಸಿ, ಪ್ರಧಾನಿ ಬಗ್ಗೆ ಇಲ್ಲಿ ಮಾತನಾಡಬಹುದಾ ಎಂದು ಪ್ರಶ್ನಿಸಿದರು. ಈ ವೇಳೆ ಗೋಪಾಲಯ್ಯ ಮತ್ತು ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮತ್ತೆ ಗುಜರಾತ್ ನರಮೇಧ ವಿಷಯ ಪ್ರಸ್ತಾಪಿಸಿದ ಮಂಜೇಗೌಡ ಘಟನೆ ನಡೆದ ನಂತರ ದೆಹಲಿಯಲ್ಲಿ ಸಭೆಯಾಯಿತು. ಈ ವೇಳೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರಧಾನಿ ಬಗ್ಗೆ ಆಧಾರವಿದ್ದರೆ ಮಾತನಾಡಿ, ವಿನಾಕಾರಣ ಪ್ರಧಾನಿ ಬಗ್ಗೆ ಮಾತು ಬೇಡ ಎಂದರು.