ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಸರ್ಕಾರದ ಸಚಿವಾಲಯ ಸೇರಿದಂತೆ ರಾಜ್ಯ ಮಟ್ಟದ ಎಲ್ಲಾ ಇಲಾಖಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿ/ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುವ ಬಗ್ಗೆ ಉಲ್ಲೇಖಿತ ಆದೇಶಗಳು ಮತ್ತು ಸುತ್ತೋಲೆಯಲ್ಲಿ ರಾಜ್ಯ ಸರ್ಕಾರದಿಂದ ಕೆಲವು ಮಾರ್ಗಸೂಚಿಗಳನ್ನು ಮತ್ತು ನಿರ್ದೇಶನವನ್ನು ನೀಡಲಾಗಿದೆ.
ಈ ಆದೇಶದಲ್ಲಿ ಅತ್ಯಗತ್ಯ ಸೇವೆಯನ್ನು ಒದಗಿಸುತ್ತಿರುವ ಇಲಾಖೆಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳು, ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆ, ನಿಗಮ/ಮಂಡಳಿ/ಪ್ರಾಧಿಕಾರದ ಕಚೇರಿಗಳು ಶೇಕಡಾ 50 ರಷ್ಟು ಅಧಿಕಾರಿ/ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸತಕ್ಕದೆಂದು, ಉಳಿದ ಶೇಕಡಾ 50 ರಷ್ಟು ಅಧಿಕಾರಿ/ಸಿಬ್ಬಂದಿಯನ್ನು ಕೋವಿಡ್-19ರ ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯಕ್ಕಾಗಿ ನಿಯೋಜಿಸತಕ್ಕದೆಂದು ತಿಳಿಸಲಾಗಿದೆ. ದೃಷ್ಟಿಹೀನ ಹಾಗೂ ಇತರ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ/ಸಿಬ್ಬಂದಿ ಮತ್ತು ಗರ್ಭಿಣಿ ಮಹಿಳಾ ಸಿಬ್ಬಂದಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿರುತ್ತದೆ. ಈ ಮಾರ್ಗಸೂಚಿಯು ಮೇ 4 ರ ವರೆಗೆ ಜಾರಿಯಲ್ಲಿರುತ್ತದೆ.