ಕರ್ನಾಟಕ

karnataka

ETV Bharat / state

ಸರ್ಕಾರಿ ವಕೀಲರ ನೇಮಕಾತಿಗೆ ಮಾರ್ಗಸೂಚಿ : ಮಾಧುಸ್ವಾಮಿ ಭರವಸೆ - ವಿಧಾನಪರಿಷತ್​ನಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ

ಕೇಸ್​ಗಳಲ್ಲಿನ ಹಿನ್ನಡೆಗೆ ಇಲಾಖೆ ಕೊಡುವ ಮಾಹಿತಿ ತಪ್ಪಿದೆಯೋ, ವಕೀಲರ ತಪ್ಪಿದೆಯೋ ಪರಿಶೀಲಿಸಬೇಕು ಎಂದು ಸೂಚಿಸಿದ್ದೇನೆ. ನಾನು ಯಾವುದಕ್ಕೂ ರಾಜಿಯಾಗುವುದಿಲ್ಲ, ಸ್ವಲ್ಪ ವ್ಯತ್ಯಾಸ ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ವಕೀಲರನ್ನು ತೆಗೆದು ಹಾಕಲಾಗುತ್ತದೆ. ಅಲ್ಲದೇ ಸರ್ಕಾರಿ ವಕೀಲರ ನೇಮಕಾತಿಗೆ ಮಾರ್ಗಸೂಚಿ ಬಿಡುಗಡೆ ಮಾಡುವ ಭರವಸೆಯನ್ನು ಸಚಿವ ಮಾಧುಸ್ವಾಮಿ ನೀಡಿದ್ದಾರೆ..

Madhuswamy assures
ಮಾಧುಸ್ವಾಮಿ

By

Published : Mar 22, 2022, 4:54 PM IST

ಬೆಂಗಳೂರು :ಹೈಕೋರ್ಟ್ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಸರ್ಕಾರದ ಪರ ವಾದ ಮಂಡಿಸುವ ವಕೀಲರ ನೇಮಕಾತಿಗೆ ಮಾನದಂಡ ನಿಗದಿಪಡಿಸಲಾಗುತ್ತದೆ. ಸರ್ಕಾರಿ ಕೇಸ್​​ಗಳಲ್ಲಿ ಲೋಪದಿಂದ ಆಗುವ ಹಿನ್ನಡೆಗಳಿಗೆ ಇಲಾಖಾ ಅಧಿಕಾರಿಗಳು ಹಾಗೂ ಸರ್ಕಾರಿ ವಕೀಲರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಭರವಸೆ ನೀಡಿದ್ದಾರೆ.

ವಿಧಾನಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಸರ್ಕಾರಿ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ ಬಿಬಿಎಂಪಿ, ಬಿಡಿಎಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸರ್ಕಾರಿ ವಕೀಲರ ನೇಮಕಾತಿ ಪ್ರಕ್ರಿಯೆ ಕುರಿತು ಪ್ರಸ್ತಾಪಿಸಿದರು.

ಬಿಬಿಎಂಪಿ, ಬಿಡಿಎ ಇತರೆಡೆ ಅಸಮರ್ಥರನ್ನೇ ಸರ್ಕಾರಿ ವಕೀಲರನ್ನಾಗಿ ನೇಮಿಸಿ ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಲು ಎಲ್ಲೋ ಒಂದು ಕಡೆ ಬಿಬಿಎಂಪಿ ಪರ ಸರಿಯಾಗಿ ವಾದ ಮಂಡಿಸದೇ ಇರುವುದೇ ಕಾರಣ ಎಂದು ಸಾರ್ವಜನಿಕವಾಗಿ ಮಾತನಾಡಲಾಗುತ್ತಿದೆ.

ಬಿಬಿಎಂಪಿಯ 7-8 ಸಾವಿರ ಕೇಸ್​ಗಳು ಸಿವಿಲ್ ಕೋರ್ಟ್​ನಿಂದ ಸುಪ್ರೀಂಕೋರ್ಟ್‌ವರೆಗೆ ಇದೆ. ಇರುವ ಕೇಸ್​​ಗಳಲ್ಲಿ ಶೇ.75ರಷ್ಟು ಖಾಸಗಿ ವ್ಯಕ್ತಿಗಳ ಪರವಾಗಿಯೇ ತೀರ್ಪು ಬರುತ್ತಿದೆ. ಬಿಬಿಎಂಪಿಗೆ ವಕೀಲರ ನೇಮಿಸುವಲ್ಲಿ ಸರ್ಕಾರದ ಮಾನದಂಡವೇನು, ಎಲ್ಲಾ ದಾಖಲೆ ಇದ್ದರೂ ಸೋತರೆ ವಕೀಲರಿಗೆ ವಿಧಿಸುವ ದಂಡವೇನು? ಎಂದು ಪ್ರಶ್ನಿಸಿದರು.

ಖಾಸಗಿ ವ್ಯಕ್ತಿಗಳು ಪಾರ್ಕ್​ನಲ್ಲೇ ಮನೆ ಕಟ್ಟಿಕೊಂಡರೂ ಆ ಕೇಸ್​ನಲ್ಲಿ ಪಾಲಿಕೆ ಸೋತಿದೆ. ಬೆಂಗಳೂರಿನಲ್ಲಿ ಆಸ್ತಿ ವಜ್ರಕ್ಕಿಂತ ದುಬಾರಿಯಾಗಿದೆ. ಆದರೂ ಪಾಲಿಕೆ ಆಸ್ತಿ ಖಾಸಗಿಯವರ ಪರವಾಗುತ್ತಿದೆ. ಹಾಗಾಗಿ, ಕಾನೂನು ಸಚಿವರು ಇದಕ್ಕೊಂದು ಮಾನದಂಡ ರೂಪಿಸಿ, ಜಾತಿ, ಮತ ಬೇಧ ಎಲ್ಲ ಬಿಟ್ಟು ಸರ್ಕಾರಿ ವಕೀಲರ ನೇಮಕಕ್ಕೆ ಅರ್ಹ ಮಾನದಂಡ ಒಳಗೊಂಡ ನೀತಿ ರೂಪಿಸಿ ಎಂದು ಒತ್ತಾಯಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಬರೀ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಸರ್ಕಾರಿ ವಕೀಲರು ಸರ್ಕಾರಿ ಭೂಮಿ ಉಳಿಸುವಲ್ಲಿ ವಿಫಲಾಗಿದ್ದಾರೆ. ವಕೀಲರು ಆರ್ಥಿಕವಾಗಿ ಬೆಳೆಯುತ್ತಿದ್ದಾರೆ. ಆದರೆ, ಸರ್ಕಾರದ ಕೇಸುಗಳಲ್ಲಿ ಗೆಲ್ಲುತ್ತಿಲ್ಲ, ಇದನ್ನು ತಹಬದಿಗೆ ತರಬೇಕಿದೆ. ಇಲಾಖಾ ಅಧಿಕಾರಿಗಳು, ವಕೀಲರಿಬ್ಬರೂ ಶಾಮೀಲಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ. ಇದಕ್ಕೆ ನಿಯಂತ್ರಣ ಹಾಕಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ‌ಸದಸ್ಯ ರವಿಕುಮಾರ್ ಮಾತನಾಡಿ, ಸರ್ಕಾರಿ ವಕೀಲರು ಖಾಸಗಿ ವ್ಯಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಕಾರಣ ಸರ್ಕಾರಿ ಆಸ್ತಿ ಕೈತಪ್ಪುವಂತಾಗುತ್ತಿದೆ. ಸಾವಿರಾರು ಕೋಟಿ ಆಸ್ತಿ ನುಂಗಿ ಹಾಕಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು. ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಸಚಿವ ಮಾಧುಸ್ವಾಮಿ, ಸರ್ಕಾರಿ ವಕೀಲರನ್ನು ನೇಮಿಸುವಾಗ ಡಿಜಿಪಿ, ಡಿಸಿ ಶಿಫಾರಸು ಪಡೆದುಕೊಳ್ಳುತ್ತೇವೆ.

ಪಿಪಿಗಳ ನೇಮಕದಲ್ಲಿ ಪರೀಕ್ಷೆ ನಡೆಸಿಯೇ ನೇಮಕ ಮಾಡಲಾಗುತ್ತದೆ. ಇಷ್ಟಾದರೂ ಸಕ್ಸಸ್ ರೇಟ್ ಕಡಿಮೆ ಆಗುತ್ತಿದೆ. ಹಾಗಾಗಿ, ಇನ್ಮುಂದೆ ಜಿಲ್ಲಾಧಿಕಾರಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ನಮ್ಮ ಸರ್ಕಾರಿ ವಕೀಲರ ರಿವ್ಯೂ ಮಾಡಬೇಕು ಎಂದು ಸೂಚಿಸಿದ್ದೇನೆ.

ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಯಾವ ಇಲಾಖೆಯ ಕೇಸ್ ಇದೆ, ಕೇಸ್​ಗಳಲ್ಲಿನ ಹಿನ್ನಡೆಗೆ ಇಲಾಖೆ ಕೊಡುವ ಮಾಹಿತಿ ತಪ್ಪಿದೆಯೋ, ವಕೀಲರ ತಪ್ಪಿದೆಯೋ ಪರಿಶೀಲಿಸಬೇಕು ಎಂದು ಸೂಚಿಸಿದ್ದೇನೆ. ನಾನು ಯಾವುದಕ್ಕೂ ರಾಜಿಯಾಗುವುದಿಲ್ಲ, ಸ್ವಲ್ಪ ವ್ಯತ್ಯಾಸ ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ವಕೀಲರನ್ನು ತೆಗೆದು ಹಾಕಲಾಗುತ್ತದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ದಕ್ಷಿಣ ಕಾಶಿ ಅಂತರಗಂಗೆ ಅಭಿವೃದ್ಧಿ ಕ್ರಮ : ಪ್ರವಾಸೋದ್ಯಮದ ಸಚಿವ ಆನಂದ್ ಸಿಂಗ್

ಬಿಬಿಎಂಪಿ ಹೊರಗಡೆ ನಾವು ವಕೀಲರ ನೇಮಕ ಮಾಡಲ್ಲ, ಅವರೇ ನೇಮಕ ಮಾಡಿಕೊಳ್ಳಲಿದ್ದಾರೆ. ಸ್ಥಳೀಯ ಸಂಸ್ಥೆ, ನಿಗಮ ಮಂಡಳಿಗಳಲ್ಲಿ ಯಾವ ರೀತಿ ವಕೀಲರ ನೇಮಕ ಮಾಡಲಾಗುತ್ತಿದೆ ಎಂದು ಸರ್ಕಾರದ ಗಮನಕ್ಕೆ ಬಂದಿಲ್ಲ. ಇದನ್ನು ವ್ಯವಸ್ಥೆಗೆ ತರಬೇಕಿದೆ. ಇಲ್ಲೆಲ್ಲಾ ಇನ್ಮುಂದೆ ಯಾವ ರೀತಿ ನೇಮಕ ಎಂದು ಮಾರ್ಗಸೂಚಿ ಮಾಡಲಿದ್ದೇವೆ ಎಂದರು.

ನಾವು ಸಕಾಲಕ್ಕೆ ಸರಿಯಾಗಿ ಅಪೀಲನ್ನೇ ಮಾಡಿಲ್ಲ. ಹಾಗಾಗಿ, ನಾವು ಸರ್ಕಾರಿ ಆಸ್ತಿ ಕಳೆದುಕೊಳ್ಳಬೇಕಾಗಿದೆ. ಇದನ್ನೆಲ್ಲಾ ಸ್ಟ್ರೀಮ್ ಲೈನ್​ಗೆ ತರಬೇಕಿದೆ, ಅದಕ್ಕಾಗಿ ಇನ್ನುಂದೆ ಬಾರ್ ಕೌನ್ಸಿಲ್ ಶಿಫಾರಸು, ಜಿಲ್ಲಾ ನ್ಯಾಯಧೀಶರ ಶಿಫಾರಸು ಪಡೆದುಕೊಳ್ಳಲಾಗುತ್ತದೆ ಎಂದರು.ನಈಗ ಸರ್ಕಾರಿ ವಕೀಲರಿಗೆ ವೇತನ ನಿಗದಿಪಡಿಸಲಾಗಿದೆ. ಹಾಗಾಗಿ, ಅನುಭವ ಇರಲಿ ಬಿಡಲಿ ಬಂದು ಸೇರಿಕೊಳ್ಳುತ್ತಿದ್ದಾರೆ.

ಬಹಳ ನೆಮ್ಮದಿ ಜೀವನ ಎಂದು ಒತ್ತಡ ತಂದು ಇಲ್ಲಿಗೆ ಬರುತ್ತಿದ್ದಾರೆ. ಹಾಗಾಗಿಯೇ, ನಮಗೆ ಕೇಸ್​ಗಳಲ್ಲಿ ಹಿನ್ನಡೆಯಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ಹೈಕೋರ್ಟ್​ನಲ್ಲಿ ಸರ್ಕಾರದ ಪರ ವಾದ ಮಂಡಿಸಲು ನಮ್ಮ ಎಜಿ ಶಿಫಾರಸು ಮಾಡದೆ ಯಾರನ್ನೂ ಸರ್ಕಾರಿ ವಕೀಲರನ್ನಾಗಿ ನೇಮಕ ಮಾಡಿಲ್ಲ.

ಜಿಲ್ಲಾ ಕೋರ್ಟ್‌ಗಳಲ್ಲಿಯೂ ಬಿಗಿ ಮಾಡುತ್ತಿದ್ದೇವೆ. ನಿಗಮ ಮಂಡಳಿ, ನಗರ ಸ್ಥಳೀಯ ಸಂಸ್ಥೆಗಳಲ್ಲೂ ಸ್ಟ್ರೀಮ್ ಲೈನ್ ತರಬೇಕಿದೆ. ಇದಕ್ಕೆ ಮಾನದಂಡವನ್ನು ನಿಗದಿಪಡಿಸಲಾಗುತ್ತದೆ‌. ಇಲಾಖೆ ಅಧಿಕಾರಿಗಳು ಯಾರು ಕೇಸ್​​ಗಳಲ್ಲಿ ಆಕ್ಷೇಪಣೆ ಕೊಟ್ಟಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇದು ದೊಡ್ಡ ವರ್ತುಲ, ಬೇದಿಸುವುದು ಕಷ್ಟ ಆದರೂ ಸಾಧ್ಯವಾದಷ್ಟು ಬಿಗಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ABOUT THE AUTHOR

...view details