ಕರ್ನಾಟಕ

karnataka

ETV Bharat / state

ಅತಿಥಿ ಉಪನ್ಯಾಸಕರ ವೇತನ ವಿಚಾರ: ಸದನದ ಬಾವಿಗಿಳಿದು ಆಡಳಿತ ಪಕ್ಷದ ಸದಸ್ಯನಿಂದಲೇ ಧರಣಿ - ಬಿಜೆಪಿ ಸದಸ್ಯ ಆಯನೂರು ಮಂಜುನಾಥ್

ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ, ಅತಿಥಿ ಉಪನ್ಯಾಸಕರಿಗೆ ವೇತನ ನೀಡದ ಸರ್ಕಾರದ ನಿಲುವನ್ನು ಖಂಡಿಸಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಧರಣಿ ನಡೆಸಿದರು.

Guest lecturers salary issue; protest from the ruling party member
ಅತಿಥಿ ಉಪನ್ಯಾಸಕರ ವೇತನ ವಿಚಾರ; ಆಡಳಿತ ಪಕ್ಷದ ಸದ್ಯನಿಂದಲೇ ಸದನದ ಬಾವಿಗಿಳಿದು ಧರಣಿ

By

Published : Sep 22, 2020, 1:40 PM IST

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ವೇತನ ನೀಡದ ಸರ್ಕಾರದ ನಿಲುವನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.

ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಅತಿಥಿ ಉಪನ್ಯಾಸಕರ ವೇತನ ವಿಷಯ ಕುರಿತು ಪ್ರಸ್ತಾಪ ಮಾಡಿದ ಆಡಳಿತಾರೂಢ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸರ್ಕಾರಿ ಪದವಿ ಕಾಲೇಜಿನಲ್ಲಿ ಶೇ. 70ರಷ್ಟು ಅತಿಥಿ ಉಪನ್ಯಾಸಕರಿದ್ದಾರೆ. ಮಾರ್ಚ್​​​​ನಿಂದ ಅವರಿಗೆ ವೇತನವನ್ನೇ ಕೊಟ್ಟಿಲ್ಲ, ಸರ್ಕಾರವನ್ನು ಕೇಳಿದರೆ ಅವರನ್ನು 10 ತಿಂಗಳಿಗಾಗಿ ನೇಮಕಗೊಳಿಸಿರುವುದಾಗಿ ಹೇಳಿದೆ. ಆದರೆ ಸರ್ಕಾರದ್ದೇ ಸುತ್ತೋಲೆ ಇದೆ. ಕೋವಿಡ್ ಸಮಯದಲ್ಲಿ ವೇತನ ಕಡಿತ ಬೇಡ ಎಂಬ ಸೂಚನೆ ಇದೆ. ಆದರೂ ಉಪನ್ಯಾಸಕರಿಗೆ ವೇತನ ನೀಡಿಲ್ಲ ಎಂದು ಸಿಡಿಮಿಡಿಗೊಂಡರು.

ಈವರೆಗೂ ಲಾಸ್ಟ್ ವರ್ಕಿಂಗ್ ಡೇ ಘೋಷಣೆ ಮಾಡಿಲ್ಲ. ಕೋವಿಡ್ ಸಮಯದಲ್ಲಿಯೂ ಕಾಲೇಜುಗಳ ಎಲ್ಲಾ ಕರ್ತವ್ಯಕ್ಕೂ ಅವರನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರ ವೇತನ ನೀಡದೆ ಅವರನ್ನು ದುಡಿಸಿಕೊಂಡಿದೆ. ಈಗಾಗಲೇ ನಾಲ್ಕಾರು ಜನ ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಜೀವನ ನಿರ್ವಹಣೆ ಕಷ್ಟವಾಗಿದೆ, ಉಪವಾಸದಿಂದ ಇರುವ ಸ್ಥಿತಿ ಅವರಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ನೀಡಿಲ್ಲ. ಆದರೂ ಸರ್ಕಾರ ವೇತನ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದೆ. ಹಾಗಾಗಿ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್ ಕಡೆಯಿಂದ ಉತ್ತರ ಕೊಡಿಸುವ ಭರವಸೆ ನೀಡಿದರು. ಆದ್ರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಯನೂರು ಮಂಜುನಾಥ್, ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಸಹ ಸರ್ಕಾರದಿಂದ ಉತ್ತರ ಬರುವವರೆಗೂ ಧರಣಿ ನಡೆಸುವುದಾಗಿ ಘೋಷಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.

ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪದೇ-ಪದೆ ಮನವಿ ಮಾಡಿದ್ದು, ಆಯನೂರು ಮಂಜುನಾಥ್ ಸ್ಪಂದಿಸದೆ ಧರಣಿ ಮುಂದುವರೆಸಿದರು. ನಂತರ ಆಯನೂರು ಮಂಜುನಾಥ್​​ಗೆ ಪ್ರತಿಪಕ್ಷ ಸದಸ್ಯರೂ ಸಹ ಸಾಥ್​​ ನೀಡಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ 20 ನಿಮಿಷಗಳ ಕಾಲ ಮುಂದೂಡಿದರು.

ABOUT THE AUTHOR

...view details