ಬೆಂಗಳೂರು:ಖ್ಯಾತ ರಂಗಭೂಮಿ ಕಲಾವಿದರಾದ ಗುಬ್ಬಿ ವೀರಣ್ಣರ ಮರಿಮೊಮ್ಮಗಳು ಹಾಗೂ ಖ್ಯಾತ ಗಾಯಕಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಮಗಳಾದ ಸುಷ್ಮಾ ವೀರ್, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು. ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುಷ್ಮಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಪೃಥ್ವಿ ರೆಡ್ಡಿ ಮಾತನಾಡಿ, ಕಲಾವಿದರ ಹಾಗೂ ಸಾಧಕರ ಕುಟುಂಬದಲ್ಲಿ ಜನಿಸಿದ ಸುಷ್ಮಾ ವೀರ್ ಕೂಡ ಬಹುಮುಖ ಪ್ರತಿಭೆ ಹೊಂದಿದ್ದಾರೆ. ಅಭಿನಯ, ನೃತ್ಯ, ಗಾಯನ, ಚಿತ್ರಕಲೆ, ನಿರ್ದೇಶನ, ವಿನ್ಯಾಸ ಮುಂತಾದ ಹಲವು ವಿಷಯಗಳಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಉತ್ತಮ ಕಿರುಚಿತ್ರ ಹಾಗೂ ಚಲನಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ರಂಗಭೂಮಿಯಲ್ಲಿ ಪ್ರಯೋಗಾತ್ಮಕ ಹಾಗೂ ಸೃಜನಶೀಲ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಇಂಥ ಸಾಧಕರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಜನಸಂಪರ್ಕ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸುಷ್ಮಾ ವೀರ್ ಅವರು 2004ರಲ್ಲಿ ಆಕಾಂಕ್ಷ ಎಂಬ ಎನ್‌ಜಿಒ ಸ್ಥಾಪಿಸಿದ್ದು, ಈ ಮೂಲಕ ಕಲೆ, ಸಂಸ್ಕೃತಿ, ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದಾರೆ. ದೇಶದ ವಿವಿಧೆಡೆ ಇವರ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಯುವ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ರೂಪಿಸಿಕೊಟ್ಟು ಮಾದರಿಯಾಗಿದ್ದಾರೆ ಎಂದು ಶ್ಲಾಘೀಸಿದರು.
ತೆಲುಗು ಚಿತ್ರರಂಗದಲ್ಲಿ ಉದಯೋನ್ಮುಖ ನಟಿ:ಅಂಧ ಹಾಗೂ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗಿದ್ದಾರೆ. ಹಲವು ಭಾಷೆಗಳ ಸುಮಾರು 42ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಷ್ಮಾ ವೀರ್ ಅವರು ತೆಲುಗು ಚಿತ್ರರಂಗದಲ್ಲಿ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ, ತಮಿಳು ಚಿತ್ರರಂಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ ಎಂದು ಪ್ರಶಂಸಿಸಿದರು.